ಭೂಮಿ ಹುಣ್ಣಿಮೆ ಹಬ್ಬವು ಮಲೆನಾಡಿನ ರೈತ ಮಹಿಳೆಯರಿಗೆ ಮಾತ್ರ ಸೀಮಿತವಾದ ಹಬ್ಬವಲ್ಲ; ಇದು ಮಡಿಲು ತುಂಬುವ ಭಾವನಾತ್ಮಕ ಹಿನ್ನೆಲೆಯೊಂದಿಗೆ ಭೂಮಿತಾಯಿಗೆ ಸಲ್ಲಿಸುವ ಪೂಜೆಯ ಹಬ್ಬವಾಗಿದೆ. ಮಲೆನಾಡು ಪ್ರದೇಶದ ಈಡಿಗ ಸಮುದಾಯದ ಗ್ರಾಮೀಣ ಕುಟುಂಬಗಳಲ್ಲಿ ಈ ಹಬ್ಬದ ಸಂಭ್ರಮ ಅತ್ಯಂತ ವೈವಿಧ್ಯಮಯವಾಗಿ, ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ.
ಭೂಮಣ್ಣಿ ಬುಟ್ಟಿ: ಹಬ್ಬದ ಹಿರಿಮೆಯ ಸಂಕೇತ
ಭೂಮಣ್ಣಿ ಬುಟ್ಟಿ ಹಬ್ಬದ ಕೇಂದ್ರ ಆಕರ್ಷಣೆಯಾಗಿದೆ. ಬಿದಿರು ಮತ್ತು ಹಸುವಿನ ಸಗಣಿಯಿಂದ ತಯಾರಿಸಲಾಗುವ ಈ ಬುಟ್ಟಿಯನ್ನು ಅಚ್ಚುಕಟ್ಟಾಗಿ ಸಿಂಗರಿಸಿ, ಹೋಳಿಗೆ, ದೋಸೆ, ನೈವೇದ್ಯವನ್ನು ಹೊಲಕ್ಕೆ ಒಯ್ಯಲು ಬಳಸಲಾಗುತ್ತದೆ. ಈ ಬುಟ್ಟಿಯು ಹಬ್ಬದ ಮುಖ್ಯ ಪವಿತ್ರತೆಯ ಸಂಕೇತವಾಗಿದೆ. ಗ್ರಾಮೀಣ ರೈತ ಮಹಿಳೆಯರು ಸುಮಾರು 15 ದಿನಗಳ ಮುಂಚೆಯೇ ಬುಟ್ಟಿಯನ್ನು ತಯಾರಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಅವರು ಬಿದಿರು ಬುಟ್ಟಿಗೆ ಕೆಮ್ಮಣ್ಣಿನ ಲೇಪನ ಹಚ್ಚಿ, ಆಧುನಿಕ ಬಣ್ಣಗಳ ಬದಲು ಅಕ್ಕಿಹಿಟ್ಟಿನಿಂದ ನೈಸರ್ಗಿಕ ಚಿತ್ತಾರ ಬಿಡಿಸುತ್ತಾರೆ.
ಸೀಗಿ ಹುಣ್ಣಿಮೆ ಬುಟ್ಟಿಯ ಚಿತ್ತಾರ..
ಸೀಗಿ ಹುಣ್ಣಿಮೆ ಆಗಮನಕ್ಕೆ ಇನ್ನೊಂದು ವಾರ ಇದೆ ಎನ್ನುವಷ್ಟರಲ್ಲಿ ರೈತರ ಮನೆಯಲ್ಲಿ ಹಬ್ಬದ ಸಡಗರ. ಬಹುತೇಕ ಹಳ್ಳಿಗಾಡಿನಲ್ಲಿನ ಮನೆಗಳಲ್ಲಿ ಬಿದಿರಿನ ಬುಟ್ಟಿ ಇದ್ದೇ ಇರುತ್ತವೆ. ಕೆಮ್ಮಣ್ಣು ಸುಣ್ಣದ ಚಿತ್ತಾರದ ಸೀಗಿ ಹುಣ್ಣಿಮೆ ಬುಟ್ಟಿ ಎಂದೇ ಕರೆಯುವ ಬುಟ್ಟಿಯ ಮೇಲೆ ಚಿತ್ತಾಕರ್ಷಕ ಚಿತ್ತಾರ ಬರೆಯಲಾಗುತ್ತದೆ. ಆ ಬುಟ್ಟಿಯಲ್ಲಿಯೇ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಹೊತ್ತೊಯ್ಯಲಾಗುತ್ತದೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ರೀತಿಯ ಆಚರಣೆ ಇದೆ.
ಚರಗ ಚೆಲ್ಲುವ ಪದ್ಧತಿ..
ಸೀಗೆ ಹುಣ್ಣಿಮೆ ದಿನ ಚರಗ ಚೆಲ್ಲುವುದು ಹಬ್ಬದ ಪ್ರಮುಖ ಕೆಲಸ. ಚರಗ ಚೆಲ್ಲುವುದಕ್ಕೆ ಭೂತಾಯಿ ನಮಗೆ ಕೊಟ್ಟಿದ್ದನ್ನು ನಾವು ಮರಳಿ ಕೊಡುವ ಕಾಯಕ. ಇದನ್ನು ಭೂಮಿ ತಾಯಿಯ ಸೀಮಂತ ಎಂದೂ ಹೇಳಲಾಗುತ್ತದೆ. ಬೆಳಗಿನ ಜಾವ, ಭೂತಾಯಿಗೆ ನೈವೇದ್ಯದ ರೂಪದಲ್ಲಿ ಏನೆಲ್ಲ ಖಾದ್ಯಗಳನ್ನು ಅರ್ಪಿಸಬೇಕು ಎಂದುಕೊಂಡಿರುತ್ತೇವೋ ಅವೆಲ್ಲವನ್ನು ಒಂದು ಮಣ್ಣಿನ ಮಡಕೆಯಲ್ಲಿ ಹಸಿ ಹಸಿಯಾಗಿಯೇ ಹಾಕಿ, ಅಂದರೆ, ತರಕಾರಿ, ಹಿಟ್ಟು, ಧಾನ್ಯ, ಹಸಿ ಎಣ್ಣೆ ಹೀಗೆ ಎಲ್ಲವನ್ನು ಮಿಶ್ರಣ ಮಾಡಿ, ಹೊಲಕ್ಕೆ ಹೋಗಿ, “ಹೂಲಿಗೋ ಹೂಲಿಗೋ ಹೂಲಿಗೋ..” ಎಂದು ಹೇಳುತ್ತ ಚರಗವನ್ನು ಚೆಲ್ಲಲಾಗುತ್ತದೆ. ಚರಗ ಚೆಲ್ಲುವಾಗ ಗುಳ್ಳಗಾಯಿಯನ್ನೂ ಬಳಸಲಾಗುತ್ತದೆ
ಬಗೆಬಗೆ ಖಾದ್ಯದ ಘಮ..
ಇತ್ತ ಮನೆಯ ಹೆಣ್ಣು ಮಕ್ಕಳು ಬೆಳಗಿನ ನಾಲ್ಕರಿಂದಲೇ ಈ ಹಬ್ಬಕ್ಕೆ ಬೇಕಾದ ಅಡುಗೆ ಮಾಡುವುದರಲ್ಲಿ ನಿರತರಾಗುತ್ತಾರೆ. ಕರ್ಚಿಕಾಯಿ, ಜೋಳದ ಹಿಟ್ಟಿನ ಉಂಡಗಡುಬು, ಪುಂಡಿ ಪಲ್ಯ, ಚವಳಿ ಕಾಯಿ, ಕೆಂಪಿಂಡಿ ಕಾರ, ಬದನೆ ಕಾಯಿ, ಚಟ್ನಿ, ಮೊಸರು, ಕರಿದ ಡಬಗಾಯಿ ಮೆಣಸಿನಕಾಯಿ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಅನ್ನ, ಸಾರು, ಕಡಕ್ ರೊಟ್ಟಿ, ಚಪಾತಿ, ಮೊಸರನ್ನ ಹೀಗೆ ಹತ್ತು ಹಲವು ಖಾದ್ಯವನ್ನು ಸಿದ್ಧಪಡಿಸುತ್ತಾರೆ. ಇವೆಲ್ಲವನ್ನು ಸೀಗೆಹುಣ್ಣಿಮೆ ಬುಟ್ಟಿಯಲ್ಲಿ ಬುತ್ತಿಯಂತೆ ಕಟ್ಟಿಕೊಂಡು ಹೋಗಲಾಗುತ್ತದೆ. ಅಲ್ಲಿನ ಕಲ್ಲಿನ ಪಾಂಡವರಿಗೆ ಮತ್ತು ಕಳ್ಳಗಲ್ಲಿಗೆ ಮೊದಲು ನೈವೇದ್ಯ ರೂಪದಲ್ಲಿ ಎಡೆ ಹಿಡಿದು, ಮನೆ ಮಂದಿಯೆಲ್ಲ ಕುಳಿತು ಒಟ್ಟಾಗಿ ಸಹ ಭೋಜನ ಮಾಡುತ್ತಾರೆ..
ಸಾಂಪ್ರದಾಯಿಕ ಆಚರಣೆ
ಭೂಮಿತಾಯಿಯ ಸೀಮಂತ ಆಚರಣೆ ಎನ್ನುವ ಈ ನಂಬಿಕೆ ಪ್ರಾಚೀನ ಕಾಲದಿಂದ ಬಂದಿದ್ದು, ಅದು ಮಲೆನಾಡಿನ ಈಡಿಗ ಸಮುದಾಯದ ಹೆಮ್ಮೆಯ ಹಬ್ಬವಾಗಿದೆ. ಹಬ್ಬದ ದಿನ, ರೈತ ಕುಟುಂಬಗಳು ಹೊಲದ ಮಧ್ಯದಲ್ಲಿ ಪೂಜೆ ಮಾಡುತ್ತವೆ. ಪೂಜೆಯ ನಂತರ, ಎಲ್ಲರೂ ಒಂದೇ ಕಡೆ ಸೇರಿ ನೈವೇದ್ಯ ಸವಿದು, ಹಬ್ಬದ ಸಂಭ್ರಮವನ್ನು ಅನುಭವಿಸುತ್ತಾರೆ.
ಆಧುನಿಕ ಕಾಲದಲ್ಲಿ ಹಬ್ಬದ ಅರ್ಥ
ನೂರು ವರ್ಷಗಳ ಹಿಂದಿನ ಈ ಆಚರಣೆಗಳು ಇಂದು ಕೂಡ ಆಧುನಿಕತೆ ನಡುವೆಯೂ ತಮ್ಮ ವಿಶೇಷತೆ ಕಳೆದುಕೊಳ್ಳದೆ ಮುಂದುವರಿದಿವೆ. ರೈತ ಮಹಿಳೆಯರು ತಮ್ಮ ಪಾರಂಪರಿಕ ರೀತಿಯಲ್ಲಿಯೇ ‘ಭೂಮಣ್ಣಿ ಬುಟ್ಟಿ’ ತಯಾರಿಸುತ್ತಿದ್ದಾರೆ. ಈ ಬಟ್ಟಿಯ ವಿನ್ಯಾಸ ಮತ್ತು ಅದರ ಬಳಕೆ ಒಮ್ಮೆ ನೋಡುವಂತದ್ದು. ಬಿದಿರಿನಿಂದ ಮಾಡಿದ ಈ ಬುಟ್ಟಿಯನ್ನು ಜಾಗರೂಕತೆಯಿಂದ ತಯಾರಿಸಲಾಗುತ್ತದೆ, ಇದು ಗ್ರಾಮೀಣ ಶ್ರದ್ಧೆಯ ಸಂಕೇತವಾಗಿದೆ.
ಭೂಮಿಥಾಯಿ ಪೂಜೆ
ಹಬ್ಬದ ದಿನ ಭೂಮಿತಾಯಿಗೆ ನೈವೇದ್ಯವನ್ನು ಸಮರ್ಪಿಸುವುದು ಮತ್ತು ಹೊಲದಲ್ಲಿ ಪೂಜೆ ಮಾಡುವುದು ತುಂಬಾ ಶ್ರದ್ಧಾಭಕ್ತಿಯಿಂದ ನಡೆಯುತ್ತದೆ. ಈ ಪೂಜೆಗೆ “ಭೂಮಣ್ಣಿ ಬುಟ್ಟಿ” ವಿಶೇಷ ಹಂದರವನ್ನು ತರುತ್ತದೆ. ಸಂಪ್ರದಾಯದ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಈ ವಿನ್ಯಾಸ ಕಲೆಯನ್ನು ಕಲಿಸುತ್ತಾ, ಪಾರಂಪರಿಕ ಕೌಶಲ್ಯವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುತ್ತಾರೆ.
ಸಂಪ್ರದಾಯವನ್ನು ಉಳಿಸೋಣ
ಈ ರೀತಿಯ ಹಬ್ಬಗಳು ನಮ್ಮ ಪಾರಂಪರಿಕ ಜೀವನಶೈಲಿಯ ಭಾಗವಾಗಿದ್ದು, ನಮ್ಮ ಸಂಸ್ಕೃತಿಯ ಮಹತ್ವವನ್ನು ಹಂಚಿಕೊಳ್ಳುತ್ತವೆ. ಈ ಹಬ್ಬವು ಕೇವಲ ಆಚರಣೆಯಷ್ಟೇ ಅಲ್ಲ, ಇದು ಮಣ್ಣಿನ ಭಾವನೆ, ತಾಯಿಯ ಪ್ರೀತಿ, ಮತ್ತು ಪ್ರಕೃತಿಯ ಪ್ರಾಮುಖ್ಯತೆಯ ಕುರಿತ ಪ್ರಾತಿನಿಧ್ಯ ನೀಡುತ್ತದೆ.