ಡಬ್ಲಿನ್: ಐರ್ಲೆಂಡ್ ತಂಡವು ಇತ್ತೀಚೆಗೆ ಸಾಕಷ್ಟು ಟಿ20 ಪಂದ್ಯಗಳನ್ನಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಅಲ್ಲದೆ ಬಲಿಷ್ಠ ತಂಡವನ್ನು ಹೊಂದಿದ್ದು ಭಾರತಕ್ಕೆ ಪ್ರಬಲ ಪೈಪೋಟಿ ನೀಡಿ ಸರಣಿಯನ್ನು ಕೈವಶಪಡಿಸಿಕೊಳ್ಳಲಿದೆ ಎಂದು ಐರ್ಲೆಂಡ್ ನ ಯುವ ಸ್ಪಿನ್ನರ್ ಬೆನ್ ವೈಟ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ 2-3 ರಿಂದ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, ಆಗಸ್ಟ್ 18 ರಿಂದ ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಐರ್ಲೆಂಡ್ ತನ್ನ ಪೂರ್ಣ ಪ್ರಮಾಣದ ಆಟಗಾರರನ್ನು ಅಖಾಡಕ್ಕಿಳಿಸಿ ಬಲಿಷ್ಠ ಆಗಿದ್ದರೆ, 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾ, ಯುವ ಆಟಗಾರರನ್ನೇ ಹೆಚ್ಚಾಗಿ ಅವಲಂಬಿಸಿದೆ.
ನಾವು ಯಾವ ತಂಡವನ್ನು ಬೇಕಾದರೂ ಸೋಲಿಸುತ್ತೇವೆ
ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಸಲುವಾಗಿ ಬಿಸಿಸಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯುವ ಸ್ಪಿನ್ನರ್ ಬೆನ್ ವೈಟ್,”ನಮ್ಮ ದಿನದಲ್ಲಿ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದೇವೆ. ಯಾವಾಗ ಏನಾಗುತ್ತದೆ ಎಂಬುದು ನಿಮಗೆ ತಿಳಿದಿಲ್ಲ. ಅದನ್ನು ನೀವು ನಂಬಲೇಬೇಕಾಗುತ್ತದೆ. ತವರಿನಲ್ಲಿ ಭಾರತ ವಿರುದ್ಧ ಆಡುವುದು ನಿಜಕ್ಕೂ ದೊಡ್ಡ ಸಂಗತಿ ಆಗಿದೆ. ವಿಶ್ವ ಕ್ರಿಕೆಟ್ ನಲ್ಲಿ ಆ ತಂಡ ತುಂಬಾ ಬಲಿಷ್ಠ ಆಗಿದೆ. ಆದರೆ ಅವರ ಸವಾಲನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ,” ಎಂದು ಬೆನ್ ವೈಟ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಜು ಸ್ಯಾಮ್ಸನ್ ವಿಕೆಟ್ ಪಡೆಯಲು ಬಯಸುತ್ತೇನೆ
ಐರ್ಲೆಂಡ್ ನ ಸ್ಪಿನ್ ಬಲವನ್ನು ಹೆಚ್ಚಿಸಿರುವ ಯುವ ಲೆಗ್ ಬ್ರೇಕ್ ಸ್ಪಿನ್ನರ್ ಬೆನ್ ವೈಟ್ ಆಡಿರುವ 18 ಟಿ20 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದು, ಭಾರತೀಯ ಆಟಗಾರರು ಸ್ಪಿನ್ ವಿರುದ್ಧ ಉತ್ತಮ ಆಟವಾಡಲಿದ್ದು, ಅವರ ರನ್ ದಾಹಕ್ಕೆ ಕಡಿವಾಣ ಹಾಕುತ್ತೇವೆ ಹಾಗೂ ಮುಖ್ಯವಾಗಿ ಸಂಜು ಸ್ಯಾಮ್ಸನ್ ವಿಕೆಟ್ ಪಡೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.
“ಕಳೆದ ಐರ್ಲೆಂಡ್ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅಲ್ಲದೆ ತಂಡವು ಯುವ ಪ್ರತಿಭೆಗಳಿಂದ ತುಂಬಿಕೊಂಡಿದೆ. ಸಂಜು ಅಥವಾ ಯಾರದೇ ವಿಕೆಟ್ ಪಡೆದರೂ ನಾನು ಸಂತಸಪಡುತ್ತೇನೆ,” ಎಂದು ಯುವ ಸ್ಪಿನ್ನರ್ ಹೇಳಿದ್ದಾರೆ.
“ಟೀಮ್ ಇಂಡಿಯಾ ಆಟಗಾರರು ಸ್ಪಿನ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಾರೆ ಮತ್ತು ನಮ್ಮ ಬೌಲರ್ ಗಳು ಕೂಡ ಅಷ್ಟೇ ರಕ್ಷಣಾತ್ಮಕ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇವೆ. ವಿಕೆಟ್ ಪಡೆದು ಅವರ ಮೇಲೆ ಒತ್ತಡ ಹೇರಲು ಎದುರು ನೋಡುತ್ತಿದ್ದೇವೆ,” ಎಂದು ವೈಟ್ ತಮ್ಮ ಕಾರ್ಯತಂತ್ರದ ಬಗ್ಗೆ ವಿವರಿಸಿದ್ದಾರೆ.
“ಎಲ್ಲ ಆಟಗಾರರು ಅವರದೇ ಆದ ಒತ್ತಡದಲ್ಲೇ ಆಡುತ್ತಾರೆ. ಆದರೆ ನಾವು ಅತ್ಯಮೋಘ ಬೌಲಿಂಗ್ ಸಂಘಟಿಸಿ ಒತ್ತಡವನ್ನು ಹಿಮ್ಮೆಟ್ಟಿಸಲು ಬಯಸುತ್ತೇವೆ. ಪ್ರತಿಯೊಂದು ಚೆಂಡನ್ನು ಸವಾಲಾತ್ಮಕವಾಗಿ ತೆಗೆದುಕೊಂಡು ಎದುರಾಳಿ ತಂಡಕ್ಕಿಂತ ಪಂದ್ಯದಲ್ಲಿ ಒಂದು ಹೆಜ್ಜೆ ಮುಂದೆ ಇರಲು ಬಯಸುತ್ತೇವೆ,” ಎಂದು ಲೆಗ್ ಬ್ರೇಕ್ ಸ್ಪಿನ್ನರ್ ಹೇಳಿದ್ದಾರೆ.
ಆಗಸ್ಟ್ 18 ರಿಂದ ಅದ್ಧೂರಿ ಚಾಲನೆ
ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾ ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ಹಾಗೂ ಪೌಲ್ ಸ್ಟಿರ್ಲಿಂಗ್ ಸಾರಥ್ಯದ ಐರ್ಲೆಂಡ್ ನಡುವೆ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಆಗಸ್ಟ್ 18 ರಂದು ಡುಬ್ಲಿನ್ ನಲ್ಲಿ ನಡೆಯಲಿದ್ದು, ಆಗಸ್ಟ್ 20 ಹಾಗೂ 23ರಂದು ದ್ವಿತೀಯ ಹಾಗೂ ತೃತೀಯ ಪಂದ್ಯಗಳು ಇದೇ ಮೈದಾನದಲ್ಲಿ ಆಯೋಜನೆಗೊಂಡಿದೆ.
ಭಾರತ vs ಐರ್ಲೆಂಡ್ ಪ್ರವಾಸ ವೇಳಾಪಟ್ಟಿ: 18 ಆಗಸ್ಟ್ 2023 – 1 ನೇ T20 ಪಂದ್ಯ – ದಿ ವಿಲೇಜ್, ಡಬ್ಲಿನ್, 20 ಆಗಸ್ಟ್ 2023 – 2 ನೇ T20 ಪಂದ್ಯ – ದಿ ವಿಲೇಜ್, ಡಬ್ಲಿನ್ ಮತ್ತು 23 ಆಗಸ್ಟ್ 2023 – 3 ನೇ T20 ಪಂದ್ಯ – ದಿ ವಿಲೇಜ್, ಡಬ್ಲಿನ್.
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರಿತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಫೇಮಸ್ ಸಿಂಗ್, ಮು ಕೃಷ್ಣ, ಅರ್ಶ್‌ದೀಪ್ ಮತ್ತು ಅವೇಶ್ ಖಾನ್.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಪರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೂರ್ಕಾಮ್, ಬೆನ್ ವೈಟ್ ಮತ್ತು ಕ್ರೇಗ್ ಯಂಗ್.