ಬೆಂಗಳೂರು, ಏಪ್ರಿಲ್ 24: ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಿಂದ ಭಾರತದ 25 ನಾಗರಿಕರು ಮತ್ತು ನೇಪಾಳದ ಪ್ರವಾಸಿಗನೊಬ್ಬ ಹತ್ಯೆಗೊಳಗಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಗಂಭೀರ ತಿರುವು ಪಡೆದುಕೊಂಡಿದೆ. ಭಾರತದ ಕಠಿಣ ಕ್ರಮಗಳಿಗೆ ಪ್ರತಿಸ್ಪಂದನೆ ರೂಪದಲ್ಲಿ ಪಾಕಿಸ್ತಾನವೂ ನಿರ್ಬಂಧಗಳನ್ನು ಹೇರಿದ್ದು, ಗಡಿ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಳ್ಳುತ್ತಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭದ್ರತಾ ಸಂಪುಟ ಸಮಿತಿಯು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಲು ಮತ್ತು ಅಟ್ಟಾರಿ ಗಡಿಯನ್ನು ಮುಚ್ಚಲು ನಿರ್ಧರಿಸಿದೆ. ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಲು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳ ಒಳಗೆ ದೇಶ ಬಿಡಲು ಸೂಚಿಸಲಾಗಿದೆ.
ಪಾಕಿಸ್ತಾನದ ತೀವ್ರ ಪ್ರತಿಕ್ರಿಯೆ: ಭಾರತೀಯರಿಗೆ ವೀಸಾ ರದ್ದು
ಪಹಲ್ಗಾಮ್ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಭಾರತ, ಪಾಕಿಸ್ತಾನದ ವಿರುದ್ಧ ನೀರಿನ ಹಂಚಿಕೆ ಸೇರಿದಂತೆ ರಾಜತಾಂತ್ರಿಕ ಮಟ್ಟದ ನಿರ್ಬಂಧಗಳನ್ನು ಹಾಕಿತ್ತು. ಇದಕ್ಕೆ ಪಾಕಿಸ್ತಾನ ತಕ್ಷಣವೇ ತೀವ್ರ ಕ್ರಮ ಕೈಗೊಂಡು ಭಾರತೀಯರಿಗೆ ನೀಡಿದ್ದ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದೆ. ಅಲ್ಲದೇ ಭಾರತೀಯ ವಿಮಾನಗಳಿಗೆ ತನ್ನ ವಾಯು ವಲಯವನ್ನು ಬಂದ್ ಮಾಡಿದೆ.
ಶಿಮ್ಲಾ ಒಪ್ಪಂದದ ಪಕ್ಕಕ್ಕೊತ್ತಿದ ಪಾಕಿಸ್ತಾನ
1972ರ ಶಿಮ್ಲಾ ಒಪ್ಪಂದವು ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿಭಾಗ ಶಾಂತಿ ಸ್ಥಾಪನೆಗೆ ಪ್ರಮುಖ ದಾಖಲೆ. ಆದರೆ ಈಗ ಪಾಕಿಸ್ತಾನ ಈ ಒಪ್ಪಂದವನ್ನೇ ಅಮಾನತ್ತಿಗೆ ಒಳಪಡಿಸಿದ್ದು, ಗಡಿಯಲ್ಲಿ ಗಲಾಟೆ ಹೆಚ್ಚಾಗುವ ಸಾಧ್ಯತೆಯ ಸಂದೇಶವನ್ನು ನೀಡಿದೆ.
ವಾಘಾ ಗಡಿ ಬಂದ್, ನಿರ್ಗಮನಕ್ಕೆ ಅಂತಿಮ ಗಡುವು
ಪಾಕಿಸ್ತಾನದಲ್ಲಿ ಇರುವ ಭಾರತೀಯರಿಗೆ ಏಪ್ರಿಲ್ 30ರೊಳಗೆ ದೇಶ ಬಿಟ್ಟುಕೊಡುವಂತೆ ಸೂಚನೆ ನೀಡಲಾಗಿದೆ. ಇನ್ನು ಭಾರತದಲ್ಲಿರುವ ಪಾಕಿಸ್ತಾನಿಯರಿಗೆ ಭಾನುವಾರದೊಳಗೆ ತೆರಳುವಂತೆ ಸೂಚನೆ ನೀಡಲಾಗಿದೆ. ವಾಘಾ ಗಡಿಯನ್ನು ಕೂಡ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಸಿಂಧೂ ನದಿಯ ನೀರಿಗೂ ತಡೆಯಲು ತೀರ್ಮಾನ
ಭಾರತವು ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿಯ ನೀರನ್ನು ತಡೆಯುವ ತೀರ್ಮಾನ ಕೈಗೊಂಡಿದ್ದು, ಇದನ್ನು ಪಾಕಿಸ್ತಾನ “ಯುದ್ಧದ ಸಮಾನ” ಎಂದು ವಿವರಿಸಿದೆ. ಈ ನಿರ್ಧಾರಗಳಿಂದ ಉಭಯ ರಾಷ್ಟ್ರಗಳ ನಡುವೆ ಭಯಾನಕ ಸಂಘರ್ಷ ಉಂಟಾಗುವ ಸಾಧ್ಯತೆ ಉಂಟಾಗಿದೆ.
ಗಡಿಯಲ್ಲಿ ಬಿಎಸ್‌ಎಫ್ ಯೋಧರ ಬಂಧನ
ಇದೇ ಮಧ್ಯೆ, ಪಂಜಾಬ್ ಗಡಿಯಲ್ಲಿ ಬಿಎಸ್‌ಎಫ್‌ನ ಯೋಧ ಪಿಕೆ ಸಿಂಗ್ ಅವರನ್ನು ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದಾರೆ. ಈ ಘಟನೆ ಪಹಲ್ಗಾಮ್ ದಾಳಿಯ ನಂತರದ ಉದ್ವಿಗ್ನತೆಯ ನಡುವೆ ನಡೆದಿರುವುದರಿಂದ ಗಂಭೀರ ರೂಪ ಪಡೆಯಬಹುದೆಂದು ಅಂದಾಜಿಸಲಾಗಿದೆ.
ಶಾಂತಿ ಅಥವಾ ಸಂಘರ್ಷ?
ಈ ಎಲ್ಲ ಬೆಳವಣಿಗೆಗಳು ಶಾಂತಿಯ ದಾರಿಯಿಂದ ದೂರ ಸಾಗುತ್ತಿದ್ದು, ಎರಡೂ ರಾಷ್ಟ್ರಗಳು ಗಡಿ ಪ್ರದೇಶಗಳಲ್ಲಿ ತಮ್ಮ ಪಡೆಗಳನ್ನು ಬಿಗಿಗೊಳಿಸುತ್ತಿವೆ. ಶಿಮ್ಲಾ ಒಪ್ಪಂದದ ಅಮಾನತಿನಿಂದ ಶಾಂತಿಯ ಆಸೆ ಕ್ಷೀಣವಾಗಿದ್ದು, ಮುಂದಿನ ದಿನಗಳಲ್ಲಿ ಗಡಿಯಲ್ಲಿ ಕದನದ ಗೊಬ್ಬರದ ವಾಸನೆ ಕಾಣಿಸಬಹುದು.
ನಾಳೆ ಸರ್ವಪಕ್ಷ ಸಭೆ: ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತು ನಾಳೆ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ಪಕ್ಷಗಳೊಂದಿಗೆ ಈ ಬಗ್ಗೆ ಮಾತನಾಡಲಿದ್ದಾರೆ.
ಈ ಭಯೋತ್ಪಾದಕ ದಾಳಿಯ ಗಂಭೀರತೆಯನ್ನು ಗುರುತಿಸಿ, ಭದ್ರತಾ ಸಂಪುಟ ಸಮಿತಿ (CCS) ಈ ಕೆಳಗಿನ ಕ್ರಮಗಳನ್ನು ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುತ್ತದೆ.
2. ಭಾರತದ ಹಾಗೂ ಪಾಕಿಸ್ತಾನದ ನಡುವೆ ಇರುವ ಅಟ್ಟಾರಿ ಸಮಗ್ರ ಚೆಕ್‌ಪೋಸ್ಟ್‌ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ. ಮಾನ್ಯ ಒಪ್ಪಿಗೆಯೊಂದಿಗೆ ಇಲ್ಲಿಂದ ಗಡಿಯನ್ನು ದಾಟಿದವರು ಮೇ 1 ರ ಒಳಗಾಗಿ ಈ ಮಾರ್ಗದ ಮೂಲಕವೇ ವಾಪಾಸಗಬೇಕು ಎಂದು ತಿಳಿಸಲಾಗಿದೆ.
3. SAARC ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ಹಿಂದೆ ನೀಡಲಾದ ಯಾವುದೇ SPES ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ. SPES ವೀಸಾದಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆಗೆ ಪ್ರಸ್ತುತ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶವಿದೆ.
4.ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.
5. ಪಾಕಿಸ್ತಾದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳನ್ನು ಭಾರತ ವಾಪಾಸ್ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.
ಇನ್ನಷ್ಟು ಅಪ್‌ಡೇಟ್‌ಗಾಗಿ ನಿಮ್ಮ ಜೊತೆಯಲ್ಲೇ ಇರುತ್ತೇವೆ.
– ಮಾಲ್ನಾಡ್ ಸಿರಿ