ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿ
ಬುಧವಾರ ಸಂಜೆ 6.04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ – 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ನೀಡಿದೆ. ಇದುವರೆಗೂ ಯಾವುದೇ ದೇಶ ಸ್ಪರ್ಶಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ನೌಕೆಯನ್ನು ಇಳಿಸಿರುವ ಇಸ್ರೋ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದೆ.
ಭಾರತದ ಮಹತ್ವಾಕಾಂಕ್ಷೆ ಬಾಹ್ಯಾಕಾಶ ಯೋಜನೆ ಚಂದ್ರಯಾನ – 3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬುಧವಾರ ಯಶಸ್ವಿಯಾಗಿ ಇಳಿದಿದೆ. ಅದರಲ್ಲೂ ಯಾವುದೇ ದೇಶ ಇದುವರೆಗೂ ಸ್ಪರ್ಶಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸುವ ಮೂಲಕ ಇಸ್ರೋ ತ್ರಿವಿಕ್ರಮ ಸಾಧನೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ.
ಚಂದ್ರನ ಮೇಲೆ ಇದುವರೆಗೂ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ತಮ್ಮ ನೌಕೆಗಳನ್ನು ಯಶಸ್ವಿಯಾಗಿ ಇಳಿಸಿದ್ದವು. ಈ ಮೂರು ದೇಶಗಳು ಹಲವು ಪ್ರಯತ್ನಗಳನ್ನು ನಡೆಸಿದ್ದರೆ, ಭಾರತ ಕೇವಲ ಮೂರೇ ಪ್ರಯತ್ನಗಳಲ್ಲಿ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಮೂಲಕ ವಿಶ್ವದ ಹುಬ್ಬೇರುವಂತೆ ಮಾಡಿದೆ. ಇನ್ನು, ಅನೇಕ ದೇಶಗಳು ಸತತ ಪ್ರಯತ್ನ ಮಾಡುತ್ತಿದ್ದರೂ ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗಿಲ್ಲ.
ವಿಕ್ರಮ್ ಲ್ಯಾಂಡರ್‌ಗೆ ಚಂದ್ರಯಾನ-2 ಆರ್ಬಿಟರ್ ಸ್ವಾಗತ
ವಿಕ್ರಮ್ ಲ್ಯಾಂಡರ್‌ಗೆ ಚಂದ್ರಯಾನ-2 ಆರ್ಬಿಟರ್ ಸ್ವಾಗತ, ಇಸ್ರೋ ಪ್ರಕಟಿಸಿತು ಚಂದ್ರನ ಹೊಸ ಚಿತ್ರ
ಬುಧವಾರ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರಯಾನ – 3 ಯೋಜನೆ ಸಕ್ಸಸ್ ಆಗಿದ್ದು, ವಿಕ್ರಮ್ ಲ್ಯಾಂಡರ್‌ನಲ್ಲಿರುವ ಪ್ರಜ್ಯಾನ್ ರೋವರ್ ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ. ಮುಂದಿನ 14 ದಿನಗಳ ಕಾಲ ಪ್ರಜ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ವಿವಿಧ ಅಂಶಗಳನ್ನು ಅಧ್ಯಯನ ನಡೆಸಲಿದೆ. ಸೂರ್ಯನ ಬೆಳಕೇ ಕಾಣದ ಜಾಗದಲ್ಲಿ ಪ್ರಜ್ಯಾನ್ ರೋವರ್ ಸಂಚರಿಸಲಿದ್ದು, ಇಸ್ರೋ ಹಾಗೂ ನಾಲ್ಕು ಸಿಂಹಗಳ ಅಶೋಕ ಸ್ಥಂಭದ ಲಾಂಛನವನ್ನು ಚಂದ್ರನ ಮೇಲೆ ಮೂಡಿಸಲಿದೆ.
ವಿಕ್ರಮ್ ಲ್ಯಾಂಡರ್ನ ಮೊದಲ ಫೋಟೋ
ಎಲೈಟ್ ಕ್ಲಬ್‌ಗೆ ಭಾರತ!
ಬಾಹ್ಯಾಕಾಶ ಅಂದ್ರೇ ಅಮೆರಿಕ, ರಷ್ಯಾ, ಚೀನಾ ಎಂಬಂತಾಂಗಿತ್ತು. ಯಾಕೆಂದರೆ ಈ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ತಮ್ಮ ನೌಕೆಯನ್ನು ಇಳಿಸಿದ್ದವು. ಬೇರೆ ಯಾವ ದೇಶಗಳಿಂದಲೂ ನೌಕೆ ಇಳಿಸಲು ಆಗಿದ್ದಿಲ್ಲ. ಆದರೆ, ಭಾರತ ಅಸಾಧ್ಯ ಎನಿಸಿದ ಚಂದ್ರನ ದಕ್ಷಿಣ ತುದಿಯಲ್ಲಿ ತನ್ನ ನೌಕೆಯನ್ನು ಇಳಿಸಿ ಅಮೆರಿಕ, ರಷ್ಯಾ, ಚೀನಾಗೆ ಸೆಡ್ಡು ಹೊಡೆದಿದೆ. ಅದಲ್ಲದೇ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಕೂಡ ಪಡೆದಿದೆ.
ಕೆಲವೇ ದಿನಗಳ ಹಿಂದೆ ಭಾರತಕ್ಕೂ ಮುನ್ನ ದಕ್ಷಿಣ ಧ್ರುವದಲ್ಲಿ ಇಳಿಯಲು ಹೋದ ರಷ್ಯಾದ ಲೂನಾ 25 ನೌಕೆ ಛಿದ್ರವಾಗಿದೆ. ಈಗ ಅದೇ ಜಾಗದಲ್ಲಿ ಭಾರತ ತನ್ನ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿರುವುದು ಇಸ್ರೋದ ತಾಂತ್ರಿಕ ಹಾಗೂ ವೈಜ್ಞಾನಿಕ ನೈಪುಣ್ಯತೆಯನ್ನು ವಿಶ್ವಕ್ಕೆ ಸಾರಿದಂತಾಗಿದೆ.
ಮೂರೇ ಪ್ರಯತ್ನದಲ್ಲಿ ಇಸ್ರೋ ಯಶಸ್ವಿ!
ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆಯನ್ನು ಇಳಿಸಲು ಅಮೆರಿಕ, ರಷ್ಯಾ ಹಾಗೂ ಚೀನಾ ಹಲವು ಪ್ರಯತ್ನಗಳನ್ನು ನಡೆಸಿದ್ದವು. ಆದರೆ, ಇಸ್ರೋ ಕೇವಲ ಮೂರೇ ಪ್ರಯತ್ನಗಳಲ್ಲಿ ಚಂದ್ರನ ಮೇಲೆ ತ್ರಿವಿಕ್ರಮ ಸಾಧಿಸಿದೆ. 2008ರ ಚಂದ್ರಯಾನ – 1 ಕೇವಲ ಆರ್ಬಿಟರ್ ಮಿಷನ್ ಆಗಿದ್ದು, ಶೇ.80ರಷ್ಟು ಗುರಿ ತಲುಪಿ ಯಶ ಕಂಡಿತ್ತು. 2019ರಲ್ಲಿ ಚಂದ್ರಯಾನ – 2 ಯೋಜನೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಆದರೂ ಯೋಜನೆ ಭಾಗಶಃ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಭಾರತ ಕೇವಲ ಮೂರೇ ಪ್ರಯತ್ನದಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ.