rtgh

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಜೇನುಕಲ್ಲಮ್ಮ ದೇವಸ್ಥಾನದ ಸಮಯ, ಸ್ಥಳ ಮತ್ತು ಜಾತ್ರೋತ್ಸವ


ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೋತ್ಸವ ವೈಭವದಿಂದ ನಡೆಯಿತು. ಹುಣ್ಣಿಮೆಯಂದು ಕಂಕಣ ಧರಿಸುವ ಮೂಲಕ ಆರಂಭಗೊಂಡ ಜಾತ್ರೆ ಮಹಾಲಯ ಅಮಾವಸ್ಯೆಯಂದು ಸಂಪನ್ನಗೊಂಡಿತು.

jenukallamma Temple information in kannada
jenukallamma Temple information in kannada

 ‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’ ಎಂಬಂತೆ ರಮ್ಯ – ಭವ್ಯ ಪ್ರಕೃತಿಯೈಸಿರಿಯ ಮಡಿಲಿನಲ್ಲಿ ಮೈದೋರಿ ನಿಂತಿರುವ ಜಗನ್ಮಾತೆಯೇ ಈ ಜೇನುಕಲ್ಲಮ್ಮ…!    ‘ಜೇನು + ಕಲ್ಲು + ಅಮ್ಮ’ ಎಂಬಮೂರು ವಿಭಿನ್ನ – ವಿಶಿಷ್ಟ ಶಬ್ಧಾರ್ಥಗಳ ಸಂಗಮ ಈ ಮಹಾಮಾತೆ.ಅಂದರೆ ಕಡಿದಾದ ಕಲ್ಲಿನಬೆಟ್ಟ, ಅದರ ತುಂಬಾ ಅಲ್ಲಲ್ಲಿ ಕಟ್ಟಿರುವ ಹೆಜ್ಜೇನುಗಳ ಮೊತ್ತ, ಮಧ್ಯೆ ವಿರಾಜಮಾನಳಾಗಿದ್ದಾಳೆ ಈ ಅಮ್ಮ… ಅದಕ್ಕೇ ಮಲೆನಾಡಿನ ಮಕ್ಕಳ ಬಾಯಲ್ಲಿ ಈಕೆ ಜೇನುಕಲ್ಲಮ್ಮ…!    ಇಡೀ ಹೊಸನಗರ ತಾಲ್ಲೂಕಿಗೆ ಅಂದರೆ ಮಲೆನಾಡಿನ ಹೃದಯ ಭಾಗಕ್ಕೆ ಈಕೆಯೇ ಕುಲದೈವ. ಅದರಲ್ಲಿಯೂ ಹುಂಚಾ ಹೋಬಳಿಯ ಹುಂಚಾ, ಸೊನಲೆ, ಕೋಡೂರು, ನಾಗರಕೂಡಿಗೆ, ಇಟ್ಟಕ್ಕಿ, ಹೊಸನಗರ, ಕೊಳಗಿ, ವಾರಂಬಳ್ಳಿ, ಎರಗಿ, ಕುಂಭತ್ತಿ.ಜೇನಿ-ಚಿಕ್ಕಜೇನಿ, ಮೇಲಿನಸಂಪಳ್ಳಿ, ಕಾಳಿಕಾಪುರ, ಬೆಣ್ಣಕ್ಕಿ, ಮಾವಿನಕಟ್ಟೆ, ಮುಂಬಾರು ಹೀಗೆ ಹತ್ತು ಹಲವಾರು ಹಳ್ಳಿಗಳಲ್ಲಿ ವಾಸಿಸುವ ಬಹುಸಂಖ್ಯಾತರಾದ ‘ದೀವರ’ ಜನಾಂಗಕ್ಕೆ ಈಕೆಯೇ ಹಡೆದಮ್ಮನೆಂದರೆ ಅತಿಶಯೋಕ್ತಿಯಲ್ಲ. ನಾವೆಲ್ಲಾ ಜೇನುಕಲ್ಲಮ್ಮ ತಾಯಿಯ ಒಕ್ಕಲು ಮಕ್ಕಳು ಎಂದು ಹೇಳಿಕೊಳ್ಳುವುದರಲ್ಲಿಯೇ ಅದೆಂಥದೋ ಸಂಭ್ರಮವಿದೆ ಅವರಲ್ಲಿ. 

ಇನ್ನಷ್ಟು ಓದಿ : ಸಿಗಂದೂರು ದೇವಸ್ಥಾನ | Sigandur temple information in kannada | how to reach Sigandur Chowdeshwari temple

Ammanaghatta Sri Jenukalamma Temple
Ammanaghatta Sri Jenukalamma Temple

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಇತಿಹಾಸ:-

ಹೊಸದಾಗಿ ಮದುವೆಯಾದ ಜೋಡಿಗಳಂತೂ ಕಡ್ಡಾಯವಾಗಿ ಅಮ್ಮನ ದರುಶನವನ್ನು ಪಡೆಯಲೇಬೇಕೆಂಬ ನಿಯಮ ದೀವರ ಜನಾಂಗದ ನಂಬಿಕೆಯಾಗಿದೆ. ಸಹಜವಾಗಿಯೇ ರಮ್ಯ ಸುಂದರ ಪ್ರಕೃತಿತಣವಾದ್ದರಿಂದ ಈಗಂತೂ ಎಲ್ಲಾ ಜನಾಂಗದ ಜೋಡಿಗಳು ಇಲ್ಲಿಗೆ ಬಂದು ದೇವಿಯ ಆಶೀರ್ವಾದವನ್ನು ಪಡೆದು ಸುಂದರ ಪರಿಸರ ಸ್ವರ್ಗದ ಸವಿ ಸವಿಯುತ್ತಾರೆ.   

ಜನರ ವಿವಿಧ ಕಾಯಿಲೆಗಳಿಗೂ ದೇವಿಯ ಅನುಗ್ರಹವೇ ಸಿದ್ಧೌಷದ ಎಂದರೆ ಹೆಚ್ಚುಗಾರಿಕೆಯೇನಲ್ಲ. ಕಜ್ಜಿ – ಕುರಗಳಂತಹ ಸಾಮಾನ್ಯ ರೋಗಗಳಿಂದ ಹಿಡಿದು, ಇಂದಿನ ಆಧುನಿಕ ಪ್ರಾಣಾಹಾರಕ ಪೀಡೆಗಳೂ ಸಹಾ ಈ ಅಮ್ಮನ ಆಶೀರ್ವಾದ ಬಲದಿಂದ ಹೇಳಹೆಸರಿಲ್ಲದಂಥಾಗುತ್ತವೆ. ಅದಕ್ಕೆ ಸಾಕಷ್ಟು ಪುರಾವೆಗಳೂ ಇವೆ.    ಅಡಿಕೆ ಹಿಂಗಾರ ಅಮ್ಮನ ಮೆಚ್ಚಿನ ಪುಷ್ಪ.

ಸದಾ ಮೀಸಲನ್ನೇ ಬಯಸುವ ಈ ಅಮ್ಮನನಿಗೆ ದುಂಬಿ ಸಹಾ ಮುಟ್ಟದ ಹಿಂಗಾರದ ಅರ್ಪಣೆ ಬಹುಪ್ರಿಯವಂತೆ.  ಮದುವೆಗಾಗಿ ಗಂಡು ಹೆಣ್ಣಿನ ಜಾತಕ ಅಥವಾ ತಾರಾಬಲನೋಡಿ ಸಿಷ್ಕರ್ಶಿಸುವುದು ರೂಢಿ. ಆದರೆ ಈ ಅಮ್ಮನ ಭಕ್ತರು ಅದರಲ್ಲಿಯೂ ದೀವರು ಮಾತ್ರ ಅದೆಷ್ಟೇ ಜಾತಕಫಲ ಕೂಡಲಿ ತಾರಾಬಲ ಹೊಂದಲಿ, ಇಲ್ಲಿ ಪ್ರಸಾದ ತೆಗೆಸದೆ ಮದುವೆ ನಡೆಸುವುದೇ ಅಪರೂಪವಾಗಿದೆ.   

ಸಂಪ್ರೀತಳಾದ ದೇವಿ ಪಡೆಯುವ ಹರಕೆಯಲ್ಲಿಯೂ ಹತ್ತುಹಲವು ವೈವಿಧ್ಯಗಳಿವೆ. ಬೆಳ್ಳಿ, ದನ-ಕರ ಬೆಣ್ಣೆ ಒಪ್ಪಿಸುವುದು ಉಡಿ ತುಂಬುವುದು. ಬೆಳ್ಳಿ ತೊಟ್ಟಿಲಲ್ಲಿ ಚಿನ್ನದ ಮಗು ಒಪ್ಪಿಸುವುದು ನೂರಾರು ವಿಧಗಳಿವೆ.   

ಸದಾ ಶುಚಿತ್ವ ಮೀಸಲನ್ನು ಇಷ್ಟಪಡುವ ಈ ದೇವಿ ಯಾವುದೇ ತರಹದ ಅಶುಚಿ ಮುಟ್ಟು-ಮೈಲಿಗೆಯನ್ನು ಸಹಿಸಳು. ಆದರೆ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯುಂಟು. ತಿಳಿದೂ ಮಾಡಿದರೆ ಮಾತ್ರ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ

ಇನ್ನಷ್ಟು ಓದಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪೂಜೆ ಮತ್ತು ಸೇವೆಯ ವಿವರಗಳು | Kollur Mookambika Temple Information , online booking

ಹಿನ್ನೆಲೆ ಏನು?

ಜೇನುಕಲ್ಲಮ್ಮ ಗುಡಿಯ ಎದುರಿನಲ್ಲಿ ದೊಡ್ಡದೊಂದು  ಗುಡ್ಡ ಕಾಣಿಸುತ್ತದೆ. ಮುಂಚೆ ಅಮ್ಮನವರು ಅಲ್ಲಿ ನೆಲೆಸಿದ್ದುದರಿಂದ ಅದನ್ನು ಹಳೆಯಮ್ಮನ ಘಟ್ಟ ಎನ್ನಲಾಗುತ್ತದೆ. ಸುಮಾರು 2000 ವರ್ಷಗಳಿಂದಲೂ ಅಲ್ಲಿ ಅಮ್ಮನವರಿಗೆ ಪೂಜೆ ನಡೆಯುತ್ತಿತ್ತು. ಜಾತ್ರೆಗಳು, ಪೂಜೆ ನಡೆಯುತ್ತಿದ್ದುದಕ್ಕೆ ಈಗಲೂ ಅಲ್ಲಿ ಕುರುಹುಗಳನ್ನು ಕಾಣಬಹುದು. ಒಂದು ದಿನ ಮುಟ್ಟಾದ ಹೆಂಗಸೊಬ್ಬರು ದೇವಸ್ಥಾನಕ್ಕೆ ಬಂದಿದ್ದರಿಂದ ಮೈಲಿಗೆಯಾಯಿತೆಂದು ಕೋಪಗೊಂಡ ಅಮ್ಮನವರು, ರಾತ್ರೋರಾತ್ರಿ ಬೆಟ್ಟವಿಳಿದು ಕೆಳಗಿನ ಕೊಳದಲ್ಲಿ ಸ್ನಾನ ಮಾಡಿ ಎದುರಿಗಿದ್ದ ಈ ಕಲ್ಲಿನ ಬೆಟ್ಟ ಹತ್ತಿ ಬಂಡೆಯನ್ನು ಸೀಳಿ, ಉದ್ಭವ ಮೂರ್ತಿಯಾಗಿ ಇಲ್ಲಿ ಕುಳಿತಿದ್ದಾರೆ ಎಂಬುದು ದೇವಸ್ಥಾನದ ಐತಿಹ್ಯ. ಇಲ್ಲಿನ ಬೆಟ್ಟದ ಮೇಲೆ ಅಮ್ಮನವರು ರಥದಲ್ಲಿ ಬರುವಾಗ ಸೀಳಿದ ಬಂಡೆ, ಪಾದದ ಗುರುತು, ಶಾಪದಿಂದ ಕಲ್ಲಾದ ಪತಿಪತ್ನಿ ಮುಂತಾದವನ್ನು ಕಾಣಬಹುದು. ಅಲ್ಲದೆ ಅಮ್ಮನವರ ಪತಿ ಜಮದಗ್ನಿ ಋಷಿ ತಪಸ್ಸು ಮಾಡಿದ, ಪುತ್ರ ಪರಶುರಾಮ ತಪಸ್ಸು ಮಾಡುತ್ತಿದ್ದ ಎನ್ನಲಾದ ಗುಹೆಗಳನ್ನು ಕಾಣಬಹುದು. 

ಅಪಚಾರವಾದ್ರೆ ಏಳುವ ಜೇನು ಹುಳಗಳು:-

ಈಗಲೂ ದೇಗುಲಕ್ಕೆ ಏನಾದರೂ ಅಪಚಾರವಾದರೆ ನಂಬಿದವರು ನುಡಿದಂತೆ ನಡೆಯದಿದ್ದರೆ ಇಲ್ಲಿನ ಬಂಡೆಯ ಮೇಲೆ ಜೇನುಹುಳುಗಳು ಏಳುತ್ತವೆ ಎಂಬ ನಂಬಿಕೆಯಿದೆ. ಈ ದೇವಸ್ಥಾನಕ್ಕೆ ಸ್ವಂತ ಜಾಗವಿಲ್ಲ. ಎಲ್ಲವೂ ಭಕ್ತಗಣ ಕೊಟ್ಟ ಕಾಣಿಕೆಯಿಂದಲೇ ನಡೆಯುತ್ತದೆ. ಈಚಿನ ವರ್ಷಗಳಲ್ಲಿ ದೇವಸ್ಥಾನದವರೆಗೂ ರಸ್ತೆ ಹಾಗೂ ಅನ್ನದಾಸೋಹಕ್ಕೆ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಇದಲ್ಲದೆ ನಿತ್ಯ ಅನ್ನದಾನ ವೀಕ್ಷಣಾ ಗೋಪುರ ಸೇರಿದಂತೆ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಬೇಕಿದೆ. ಅವನ್ನೆಲ್ಲ ಅಮ್ಮನೇ ನೋಡಿಕೊಳ್ಳುತ್ತಾಳೆ ಎನ್ನುವುದು ಅರ್ಚಕ ಭಾಸ್ಕರ ಜೋಯಿಸ್ ಅವರ ನಂಬಿಕೆಯಾಗಿದೆ. ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಜಾತ್ರೆಗಳು ನಡೆಯುತ್ತವೆ. ಆಗ ಅನ್ನದಾಸೋಹ ಇರುತ್ತದೆ. ಅದು ಬಿಟ್ಟರೆ ಅಮ್ಮನವರ ನಿತ್ಯಪೂಜೆ ಸಾಂಗವಾಗಿ ನಡೆಯುತ್ತದೆ. 

ಇಲ್ಲಿ ಅಮ್ಮ ಭಕ್ತರಿಗೆ ಬೇಕಾದುದನ್ನು ನೀಡಿ ತನಗೆ ಬೇಕಾದುದನ್ನು ಕೇಳಿ ಪಡೆಯುತ್ತಾಳೆ. ಈಚೆಗೆ ಒಮ್ಮೆ ಹೀಗಾಯಿತಂತೆ. ಅಮ್ಮನಿಗೆ ಅಲಂಕಾರ  ಮಾಡುವಾಗ ಗೆಜ್ಜೆ ಇಲ್ಲ ಎಂದು ಕಂಡುಬಂತು. ಅಂದೇ ಶಿವಮೊಗ್ಗದ ಮಹಿಳೆಯೊಬ್ಬರು ಹೊಸ ಗೆಜ್ಜೆ ಖರೀದಿಸಿದ್ದರಂತೆ ಆಕೆಗೆ ರಾತ್ರಿ ಮಲಗಿದಾಗ ಸ್ವಪ್ನದಲ್ಲಿ ಬಂದ ಅಮ್ಮನವರು ನೀನು ಮಾತ್ರ ಹೊಸ ಗೆಜ್ಜೆ ತೆಗೆದುಕೊಂಡೆ ನನಗಿಲ್ಲವೇ ಎಂದು ಕೇಳಿದರಂತೆ.

ಮರುದಿನವೇ ಹೊಸಗೆಜ್ಜೆಯೊಂದಿಗೆ ದೇಗುಲಕ್ಕೆ ಓಡಿ ಬಂದ ಆಕೆ ಅಮ್ಮನಿಗೆ ಗೆಜ್ಜೆ ತೊಡಿಸಿದ್ದಾರೆ. ದೇವರಲ್ಲಿ ಶಕ್ತಿಯಿದೆನಮ್ಮಲ್ಲೇ ಭಕ್ತಿ ಕುಂದಿದೆ ಎಂದು ನೊಂದು ನುಡಿಯುತ್ತಾರೆ ಅಮ್ಮನ ಪವಾಡಗಳನ್ನು ವಿವರಿಸಿದ ಅರ್ಚಕ ಭಾಸ್ಕರ ಜೋಯಿಸ್ ರವರು ಹೇಳಿದ್ದಾರೆ.

ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನವನ್ನು ತಲುಪುವುದು ಹೇಗೆ?:-

    ಶ್ರೀ ಜೇನುಕಲ್ಲಮ್ಮ ದೇವಸ್ಥಾನವು ಹೊಸನಗರದಿಂದ ರಿಪ್ಪನ್ ಪೇಟೆ – ಶೀವಮೊಗ್ಗ ಮಾರ್ಗದಲ್ಲಿ  12 ಕಿ.ಮೀ ದೂರದ ಕೋಡೂರಿನ ಸಮೀಪದಲ್ಲಿದೆ. ಕೋಡೂರಿನ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರ ದಟ್ಟ ಕಾನನದ ಬೆಟ್ಟ ಗುಡ್ಡಗಳ ಮದ್ಯೆ ನಿರ್ಮಿಸಿರುವ ರಸ್ಥೆಯಲ್ಲಿ ಸಾಗಿದಾಗ ಬಲಭಾಗದಲ್ಲಿ ದಟ್ಟ ಹಸಿರು ಕಾಡು-ಬೆಟ್ಟ, ಎಡಭಾಗದಲ್ಲಿ ಹಸಿರು ಮುರಿಯುವ ಪ್ರಪಾತ, ಅದರಾಚೆ ಆಕಾಶವನ್ನೇ ಎತ್ತಿಬಿಡಲೋ ಎಂಬಂತೆ ಎದ್ದು ನಿಂತ ಭದ್ರಾಕಾರದ ಪರ್ವತ, ಮುಸುಕಿದ ಇಬ್ಬನಿಯ ಮಂಜು, ಹಕ್ಕಿಗಳ ಚಿಲಿಪಿಲಿ ನಾದ, ಕಚಗುಳಿ ಇಡುವ ತಂಗಾಳಿ ಹೀಗೆ ವರ್ಣಿಸಲಸದಳವಾದ ಪ್ರಕೃತಿ ಸೌಂಧರ್ಯದ  ಮಡಿಲಿನಲ್ಲಿ ರಾರಾಜಿಸುತ್ತಿರುವ ಶ್ರೀ ಜೇನುಕಲ್ಲಮ್ಮನ ದೇವಸ್ಥಾನವು ಕಾಣಸಿಗುತ್ತದೆ.

  • ಶಿವಮೊಗ್ಗದಿಂದ ಹೊಸನಗರ ಮಾರ್ಗವಾಗಿ 55 ಕಿ.ಮಿ
  • ಹೊಸನಗರದಿಂದ ರಿಪ್ಪನ್ ಪೇಟೆ ಮಾರ್ಗವಾಗಿ 15 ಕಿ.ಮಿ.
  • ಕೋಡೂರಿನಿಂದ 3 ಕಿ.ಮಿ

ನೂತನ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ:-

ಶ್ರೀ ಅಮ್ಮನಘಟ್ಟ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯರ ನೆರವಿನಿಂದ ನಡೆಸಲಾಗುತ್ತಿದೆ. ಆದರೂ ಇನ್ನೂ ಅಭಿವೃದ್ಧಿ ಆಗಬೇಕಾಗಿರುವ ಕಾರ್ಯವು ಸಾಕಸ್ಠಿದೆ.    ದೇವಾಲಯದ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯರ ನೆರವಿನಿಂದ ಮಾತ್ರವೇ ನಡೆಸುವುದು ಕಸ್ಟಸಾಧ್ಯವಾಗಿರುವುದರಿಂದ ದೇವಿಯ ಭಕ್ತರಾದ ನಾವು ನೀವೆಲ್ಲರೂ ತಮಗೆ ಸಾದ್ಯವಾದಸ್ಟು ತನು,ಮನ,ದನ ಸಹಕಾರ ನೀಡಿದರೆ ನಮ್ಮೆಲ್ಲರ ತಾಯಿಯಾದ ಜೇನುಕಲ್ಲಮ್ಮ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ದೇವಾಲಯವನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಹಾಗಾಗಿ ಎಲ್ಲಾ ಭಕ್ತಾಧಿಗಳು ದೇವಿಯ ಕಾರ್ಯಕ್ಕೆ ಸಹಕರಿಸಬೇಕಾಗಿ ವಿನಂತಿ.


Leave a Reply

Your email address will not be published. Required fields are marked *