rtgh

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವನ ಮತ್ತು ಸಾಧನೆ, ಪ್ರಭಂದ, ವಿದ್ಯಾಭ್ಯಾಸ, ಶಿಕ್ಷಣ, ಕ್ಯಾಮರಾ ಪ್ರೀತಿ, ಪ್ರಶಸ್ತಿ ಮತ್ತು ಪುರಸ್ಕಾರಗಳು, ಕಾದಂಬರಿಗಳು


poornachandra tejaswi information in kannada
poornachandra tejaswi information in kannada

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ ಆದರ್ಶಗಳಿಗೆ ಬದ್ಧರಾಗಿ ಬದುಕಿದವರು.  ಹೌದು, ನಾವು ಕನ್ನಡದ ಪ್ರಮುಖ ಲೇಖಕ ಮತ್ತು ಚಿಂತಕರಲ್ಲಿ ಒಬ್ಬರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ಸ್ಮರಿಸುತ್ತಿದ್ದೇವೆ. ಇದಕ್ಕೆ ಕಾರಣ, ಇಂದು – ಸೆಪ್ಟೆಂಬರ್  8 – ತೇಜಸ್ವಿಯವರ ಜನ್ಮ ದಿನ. ಈ ಸಂದರ್ಭದಲ್ಲಿ “ಮಾಧ್ಯಮ ಅನೇಕ”, ಪೂರ್ಣಚಂದ್ರ ತೇಜಸ್ವಿ ಅವರನ್ನು ಪ್ರೀತಿ ಮತ್ತು ಗೌರವದಿಂದ ನೆನಪು ಮಾಡಿಕೊಳ್ಳುತ್ತಿದೆ.

ತೇಜಸ್ವಿ ಕುಟುಂಬದ ಪರಿಚಯ

ತೇಜಸ್ವಿ ಅವರ ತಮ್ಮ ಕೋಕಿಲೋದಯ ಚೈತ್ರ (1941), ಎಂ.ಇ ವಿದ್ಯಾಭ್ಯಾಸ ಮಾಡಿರುವ ಇವರು ಡಿಸೈನ್ ಇಂಜಿನಿಯರ್ ಆಗಿದ್ದು, ಆಸ್ಟ್ರೇಲಿಯದ ಮೆಲ್ಬೋರ್ನ್ ನಗದರಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಮರ್ಲಿನ್, ಮಗಳು ಸಿಮೋನ್ ಶಿವಾಣಿ.

ತೇಜಸ್ವಿ ಅವರ ಮೊದಲ ತಂಗಿ ದಿವಂಗತ ಇಂದುಕಲಾ (1943-1998). ಇವರು ಎಂ.ಎ ಪದವೀಧರರಾಗಿದ್ದರು. ಇವರ ಪತಿ ಆರ್ಥೋಸರ್ಜನ್ ಡಾ.ಕೆ.ಟಿ.ಸುರೇಂದ್ರ (ಬೆಂಗಳೂರು). ಎರಡನೇ ತಂಗಿ ತಾರಿಣಿ(1945). ಇವರೂ ಕೂಡ ಎಂ.ಎ ಮಾಡಿದ್ದು ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಇವರ ಪತಿ ಡಾ. ಕೆ. ಚಿದಾನಂದ ಗೌಡ. ಇವರು ಬೆಂಗಳೂರಿನ ಪ್ರತಿಷ್ಠಿತ UVCEನಲ್ಲಿ ಬಿ.ಇ ಮತ್ತು ಬರೋಡಾದ ಮಹರಾಜ ಸಯ್ಯಾಜಿ ರಾವ್ ವಿವಿಯಿಂದ ಎಂ.ಇ ಪದವಿ ಪಡೆದಿದ್ದಾರೆ. ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು, ಬಳಿಕ ಕುವೆಂಪು ವಿ.ವಿ ಉಪಕುಲಪತಿಯಾಗಿದ್ದರು.

ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ಮೊದಲನೆಯವರು ಸುಸ್ಮಿತಾ(1971), ಇಂಜಿನಿಯರಿಂಗ್ ಪದವೀಧರೆ. ಇವರ ಪತಿ ದೀಪಕ್.  ಎರಡನೆಯ ಮಗಳು ಈಶಾನ್ಯೆ(1973). ಇವರೂ ಕೂಡ ಬಿ.ಇ ಮಾಡಿದ್ದಾರೆ, ಇವರ ಪತಿ ಜ್ಞಾನೇಶ್. ತೇಜಸ್ವಿ ಅವರ ಇಬ್ಬರೂ ಮಕ್ಕಳು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಮೂಡಿಗೆರೆಯ “ನಿರುತ್ತರ”ದಲ್ಲೇ ವಾಸವಾಗಿದ್ದಾರೆ. ತೇಜಸ್ವಿ ಅವರ ಬಗೆಗಿನ ಪ್ರೀತಿಯಿಂದ, ಆಸೆಯಿಂದ, ಆಸಕ್ತಿಯಿಂದ ಅಲ್ಲಿಗೆ ಬರುವ ಎಲ್ಲರನ್ನೂ ಸತ್ಕರಿಸುತ್ತಾರೆ. ಕೋಕಿಲೋದಯ ಚೈತ್ರ ಅವರು 2019ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ತೇಜಸ್ವಿ ವಿದ್ಯಾಭ್ಯಾಸ

ಮೈಸೂರಿನ ‘ಉದಯರವಿ’ ಮನೆಯಲ್ಲೇ ಅಪ್ಪ-ಅಮ್ಮನಿಂದ ಅ ಆ ಇ ಈ ಕಲಿತ ತೇಜಸ್ವಿ, ಮೈಸೂರಿನ ಒಂಟಿಕೊಪ್ಪಲು ಸರ್ಕಾರಿ ಶಾಲೆಗೆ ಸೇರಿದರು. ಆದರೆ, ಆ ಶಾಲೆಯ ವಾತಾವಾರಣಕ್ಕೆ ಬೆದರಿ, ಶಾಲೆಗೆ ಸೇರಿದ ದಿನವೇ ಸ್ಕೂಲಿನಿಂದ ಪರಾರಿಯಾಗಿ ಮನೆ ಸೇರಿದ್ದರಂತೆ. ಹೀಗಾಗಿ, ಸ್ವಲ್ಪ ದಿನ ನಂಜುಂಡಯ್ಯ ಎಂಬ ಮೇಷ್ಟ್ರನ್ನು ನೇಮಿಸಿ ಮನೆಯಲ್ಲಿಯೇ ಪಾಠ ಹೇಳಿಸಿದ್ದರಂತೆ.

ಆ  ಬಳಿಕ, ಮನೆಯ ಹತ್ತಿರವೇ ಇದ್ದ ಶಿಶುವಿಹಾರದಲ್ಲಿ ತೇಜಸ್ವಿ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದರು. ನಂತರ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಸಹ್ಯಾದ್ರಿ ಕಾಲೇಜಿನಲ್ಲಿ ಲೋಯರ್ ಸೆಕೆಂಡರಿ ಮುಗಿಸಿದರು. ಆ ಸಂದರ್ಭದಲ್ಲೇ ಅವರಿಗೆ ಕಡಿದಾಳ್ ಶಾಮಣ್ಣ, ಕೋಣಂದೂರು ಲಿಂಗಪ್ಪರಂಥ ಗೆಳೆಯರು ಸಿಕ್ಕಿದ್ದು. ಆಕಾಶವಾಣಿಯ ಹಾಡುಗಾರ್ತಿಯಾಗಿ ಹೆಸರಾದ ಶಾಂತಾ ಜಯತೀರ್ಥ ಮತ್ತು ಐ.ಎ.ಎಸ್ ಅಧಿಕಾರಿಯಾಗಿದ್ದ ಕೊಡಗು ಮೂಲದ ಮುತ್ತಣ್ಣ ಅವರು ಕೂಡ ತೇಜಸ್ವಿ ಅವರ ಸಹಪಾಠಿಗಳಾಗಿದ್ದರು.

ಆ ಬಳಿಕ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎ ಆನರ್ಸ್ ಪದವಿ ಪಡೆದ ತೇಜಸ್ವಿ, ಮೈಸೂರು ವಿ.ವಿಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರು. ಕುವೆಂಪು ಅವರ ಶಿಷ್ಯರೂ ಮತ್ತು ಆತ್ಮೀಯರೂ ಆದ ಡಾ.ಪ್ರಭುಶಂಕರ ಮತ್ತು ಡಾ.ಜಿ.ಎಸ್.ಶಿವರುದ್ರಪ್ಪನವರು ತೇಜಸ್ವಿ ಅವರ ಗುರುಗಳಾಗಿದ್ದರು.

ತಮ್ಮ ಶಾಲಾ ಕಾಲೇಜು ಶಿಕ್ಷಣದ ಪರೀಕ್ಷೆಗಳಲ್ಲಿ ಸಾಕಷ್ಟು ಬಾರಿ ಫೇಲ್ ಆಗಿದ್ದ ತೇಜಸ್ವಿ, ಎಂದಿಗೂ ಬ್ರಿಲಿಯಂಟ್ ಎಂದು ಕರೆಯಬಹುದಾದ ವಿದ್ಯಾರ್ಥಿಯಾಗಿರಲಿಲ್ಲ. ಅದರಲ್ಲೂ, ಗಣಿತ ಮತ್ತು ಇಂಗ್ಲಿಷ್ ಪರೀಕ್ಷೆಗಳನ್ನು ಪಾಸು ಮಾಡಿಕೊಳ್ಳಲು ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ತೇಜಸ್ವಿ ಅವರಿಗೆ ಇಂಗ್ಲಿಷ್ ಕಲಿಸಲು ತಂದೆ ಕುವೆಂಪು ಅವರೇ ಸಾಕಷ್ಟು ತಲೆಕೆಡಿಸಿಕೊಂಡರೂ ಹೆಚ್ಚಿನ ಪ್ರಯೋಜನ ಆಗಲಿಲ್ಲವಂತೆ. ಆದರೆ, ತಾವು ಬೆಳೆದಂತೆ, ಓದುತ್ತಾ, ಬರೆಯುತ್ತಾ ಹೋದಂತೆ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಅರಗಿಸಿಕೊಂಡ ತೇಜಸ್ವಿ, ಸಾಕಷ್ಟು ಇಂಗ್ಲಿಷ್ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದು ಸೈ ಅನ್ನಿಸಿಕೊಂಡಿದ್ದು ಅವರ ಓದುಗರೆಲ್ಲರೂ ತಿಳಿದಿರುವ ಸತ್ಯ.

ತೇಜಸ್ವಿ ಮತ್ತು ಹವ್ಯಾಸಗಳು

ತೇಜಸ್ವಿ ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು. ಅವುಗಳಲ್ಲಿ ಕೆಲವು ಹವ್ಯಾಸಗಳ ಮಟ್ಟದಲ್ಲೇ ಉಳಿದರೆ, ಇನ್ನು ಕೆಲವು ಒಂದು ದಿನವೂ ಬಿಟ್ಟಿರಲಾರದ  ಗೀಳಿನಂತಾಗಿದ್ದವು.

ಬರವಣಿಗೆಗಿಂತಲೂ ಚಿತ್ರಕಲೆಯೇ ತೇಜಸ್ವಿ ಅವರ ಮೊದಲ ಆಸಕ್ತಿ ಆಗಿತ್ತು. ತೇಜಸ್ವಿ ಅವರು ಹಲವಾರು ಅತ್ಯುತ್ತಮ ಪೇಂಟಿಂಗ್ ಮಾಡಿದ್ದಾರೆ ಹಾಗೂ ಚಿತ್ರಗಳನ್ನು ಬಿಡಿಸಿದ್ದಾರೆ. ಸಂಗೀತಾಭ್ಯಾಸವನ್ನೂ ಮಾಡಿದ್ದ ತೇಜಸ್ವಿ, ಸಿತಾರ್ ಕೂಡ ನುಡಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿ ಕೃಷಿಯಲ್ಲಿ ತೊಡಗಿಕೊಂಡ ದಿನಗಳ ಆರಂಭದಲ್ಲಿ ಶಿಕಾರಿಗೆಂದು, ಮೀನು ಹಿಡಿಯಲೆಂದು ಕಾಡಿನಲ್ಲಿ, ಕೆರೆ, ಹಳ್ಳಗಳ ದಡದಲ್ಲಿ ದಿನಗಟ್ಟಲೆ ಕಳೆಯುತ್ತಿದ್ದರು. ಇದರ ಜೊತೆಗೆ, ಸ್ಕೂಟರ್ ರಿಪೇರಿ, ಜೀಪ್ ರಿಪೇರಿಯನ್ನೂ ಮಾಡುತ್ತಿದ್ದರು. ವಸ್ತುಗಳನ್ನು, ಉಪಕರಣಗಳನ್ನು ರಿಪೇರಿ ಮಾಡುವ ಬುದ್ಧಿ ಬಾಲ್ಯದಿಂದಲೇ ಶುರುವಾಗಿತ್ತು. ಎಷ್ಟೋ ಬಾರಿ ಇವರ ರಿಪೇರಿಯ ಫಲವಾಗಿ ಅನೇಕ ವಸ್ತುಗಳು ಹಾಳಾಗಿ ಗುಜರಿ ಸೇರುತ್ತಿದ್ದವು.

ಕನ್ನಡ ಪ್ರೀತಿ, ಶಿಕ್ಷಣ ಮಾಧ್ಯಮ ಮತ್ತು ತೇಜಸ್ವಿ

“ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲ ಬೂಸ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ, ನಮ್ಮ ಮುಂದಿರುವ ಆಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ. ಕನ್ನಡ ಭಾಷೆಯ ಏಳಿಗೆಗೂ ಅಪಾರ ಸಹಾಯವಾಗುತ್ತದೆ” ಅನ್ನುವುದು ತೇಜಸ್ವಿ ಅವರ ನಿಷ್ಠುರ ನಿಲುವಾಗಿತ್ತು.

“ಅತಿ ಮಡಿವಂತಿಕೆಯಿಂದ ಭಾಷೆ ಬೆಳೆಯೋದಿಲ್ಲ. ಇಂಗ್ಲಿಷ್ ಭಾಷೆ ಯಾಕೆ ಪಾಪ್ಯುಲರ್ ಆಗ್ತಿದೆ ಅಂದ್ರೆ, ಜಗತ್ತಿನ ಎಲ್ಲ ಭಾಷೆಗಳಿಂದಲೂ ಅದು ಪದಗಳನ್ನ ತನ್ನೊಳಗೆ ಸೇರಿಸ್ಕೋತಾ ಇದೆ ಅದಕ್ಕೆ” ಅನ್ನುವುದು ತೇಜಸ್ವಿ ಅವರ ಚಿಂತನೆಯಾಗಿತ್ತು.

ಇದೇ ವೇಳೆ, ಶಿಕ್ಷಣ ಮಾಧ್ಯಮದ ಬಗ್ಗೆಯೂ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದ ತೇಜಸ್ವಿ, “ಯಾವುದೇ ವಿಚಾರವನ್ನು ಮಾತೃಭಾಷೆಯಲ್ಲಿ ಕಲಿತರಷ್ಟೇ ಮಕ್ಕಳು ಸರಿಯಾಗಿ ಗ್ರಹಿಸುವುದು. ಭಾಷೆ ಕಲಿಯುವುದಕ್ಕೂ ಮತ್ತು ಆ ಭಾಷಾ ಮಾಧ್ಯಮದಲ್ಲಿ ಇತರ ವಿಷಯಗಳನ್ನು ಕಲಿಯುವುದಕ್ಕೂ ವ್ಯತ್ಯಾಸವಿದೆ” ಅನ್ನುತ್ತಿದ್ದರು.

ತೇಜಸ್ವಿ ಮತ್ತು ರಾಜಕಾರಣ

ತಾವು ನಂಬಿದ ಸಿದ್ಧಾಂತಗಳ ಜೊತೆಗೆ ಕಿಂಚಿತ್ತೂ ರಾಜಿಮಾಡಿಕೊಳ್ಳದ ತೇಜಸ್ವಿ, ರಾಜಕೀಯ ಮತ್ತು ರಾಜಕಾರಣಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಹೀಗಿದ್ದರೂ ಕೂಡ, 1972ರ ವಿಧಾನಸಭಾ ಚುನಾವಣೆ ವೇಳೆ ತೇಜಸ್ವಿ ಅವರನ್ನು ತೀರ್ಥಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲು ಅವರ ಸ್ನೇಹಿತರ ಬಳಗ ಬಯಸಿತ್ತು. ಏಕೆಂದರೆ, ಆ ಕ್ಷೇತ್ರವನ್ನು ಶಾಂತವೇರಿ ಗೋಪಾಲ ಗೌಡರು ಎರಡು ಬಾರಿ ಪ್ರತಿನಿಧಿಸಿದ್ದರು. ಅನಾರೋಗ್ಯದ ಕಾರಣ ಅವರು ಮತ್ತೆ ಸ್ಪರ್ಧಿಸಲಾಗುತ್ತಿರಲಿಲ್ಲ. ಹೀಗಾಗಿ, ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ತೇಜಸ್ವಿ ಅವರನ್ನು ಕಣಕ್ಕಿಳಿಸಿದರೆ ಸರಿಯಾಗುತ್ತದೆ ಎಂದು ಭಾವಿಸಿದ್ದರು. ಆದರೆ, ತೇಜಸ್ವಿ ಅವರನ್ನು ಒಪ್ಪಿಸುವುದು ಅಷ್ಟು ಸುಲಭವಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಹೀಗಾಗಿ ತೇಜಸ್ವಿ ಅವರಿಗೆ ಆಪ್ತ ಗೆಳೆಯರಾಗಿದ್ದ ಕೋಣಂದೂರು ಲಿಂಗಪ್ಪ ಮತ್ತು ಕಡಿದಾಳ್ ಶಾಮಣ್ಣನವರಿಗೆ ತೇಜಸ್ವಿಯವರನ್ನು ಒಪ್ಪಿಸುವ ಜವಾಬ್ದಾರಿ ಕೊಟ್ಟಿದ್ದರು. ಮೂಡಿಗೆರೆಯ ತೇಜಸ್ವಿ ಮನೆಗೆ ಹೋದ ಅವರಿಬ್ಬರೂ ಹೇಗೋ ಮಾಡಿ ತೇಜಸ್ವಿ ಅವರನ್ನು ಒಪ್ಪಿಸಿದರು. ನಾಮಪತ್ರ ಸಲ್ಲಿಸಲು ಅಗತ್ಯವಿದ್ದ ದಾಖಲೆಗಳನ್ನು ಹೊಂದಿಸಿಕೊಂಡು, ಮೂವರೂ ಕಾರಿನಲ್ಲಿ ತೀರ್ಥಹಳ್ಳಿಗೆ ಹೊರಟರು. ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ತೇಜಸ್ವಿಯವರಿಗೆ ಏನನ್ನಿಸಿತೋ ಏನೋ, “ಲಿಂಗಪ್ಪ, ಅದೇನೋ ನಾಮಪತ್ರದ ದಾಖಲೆ ಅಂದ್ಯಲ್ಲ ತೋರಿಸೋ”, ಅಂದರಂತೆ. ನೋಡುವುದಕ್ಕಾಗಿ ಕೇಳುತ್ತಿರಬೇಕು ಅಂದುಕೊಂಡ ಲಿಂಗಪ್ಪನವರು ಕೈಚೀಲದಲ್ಲಿದ್ದ ನಾಮಪತ್ರ ಮತ್ತಿತರ ದಾಖಲೆಗಳನ್ನು ತೇಜಸ್ವಿ ಕೈಗಿಟ್ಟರಂತೆ, ತಕ್ಷಣವೇ ಅಷ್ಟೂ ದಾಖಲೆ ಪತ್ರಗಳನ್ನು ಪರಪರನೆ ಹರಿದ ತೇಜಸ್ವಿ, ಕಾರಿನ ಕಿಟಕಿಯಿಂದ ಆಚೆಗೆ ಎಸೆದು “ನೀವು ಯಾರಾದರೂ ಚುನಾವಣೆಗೆ ನಿಲ್ಲಿ ಅಂದ್ರೆ, ನನ್ನ ತಲೆಗೆ ಕಟ್ಟಲು ಬಂದಿದ್ದೀರಾ ನನ್ನನ್ನು ಏನು ಮಾಡಬೇಕು ಅಂದ್ಕೊಂಡಿದ್ದೀರಾ” ಎಂದು ತರಾಟೆಗೆ ತೆಗೆದುಕೊಂಡರಂತೆ. ಇಷ್ಟಾದ ಮೇಲೆ, “ನಾನೇ ಆ ಕ್ಷೇತ್ರದಿಂದ ಕಣಕ್ಕಿಳಿದು, ಶಾಸಕನಾಗಿ ಆಯ್ಕೆಯಾದೆ” ಎಂದು ಕೋಣಂದೂರು ಲಿಂಗಪ್ಪನವರು ಹೇಳಿದ್ದರು.

ಇದೆಲ್ಲವೂ ಆದ ಸಾಕಷ್ಟು ವರ್ಷಗಳ ನಂತರ, ರಾಜಕೀಯ ಪಕ್ಷದ ದೊಡ್ಡ ಮುಖಂಡರೊಬ್ಬರು, ತೇಜಸ್ವಿಯವರನ್ನು ವಿಧಾನಪರಿಷತ್ ಸದಸ್ಯರಾಗಿ ನಾಮಕರಣ ಮಾಡಲು ಬಯಸಿದ್ದರಂತೆ. ಅವರ ಮಾತಿಗೂ ಸೊಪ್ಪುಹಾಕದ ತೇಜಸ್ವಿ, ಮತ್ತೊಮ್ಮೆ ತಮ್ಮ ವ್ಯಕ್ತಿತ್ವ ಎಂಥದ್ದು ಅನ್ನುವುದನ್ನು ನಿರೂಪಿಸಿದ್ದರು.

ತೇಜಸ್ವಿ ಮತ್ತು ಕ್ಯಾಮರಾ ಪ್ರೀತಿ

ತೇಜಸ್ವಿ ಅವರು ಹೈಸ್ಕೂಲ್ ಓದುತ್ತಿದ್ದಾಗಲೇ ಕ್ಯಾಮರಾದ ಬಗ್ಗೆ ಭಾರಿ ಆಕರ್ಷಣೆ ಬೆಳೆದಿತ್ತು. ಆದರೆ, ಈ ಹೊತ್ತಿನಂತೆ ಆಗಿನ್ನೂ ಕ್ಯಾಮರ ಅನ್ನುವುದು ಸರ್ವಾಂತರ್ಯಾಮಿ ಆಗಿರಲಿಲ್ಲ, ಬೇಕು ಅನ್ನಿಸಿದವರೆಲ್ಲ ಕೊಂಡುಕೊಳ್ಳೋಷ್ಟು ಸುಲಭವೂ ಆಗಿರಲಿಲ್ಲ. ಅಪ್ಪ ಅಮ್ಮಾನೂ ಕೊಡಿಸುತ್ತಿರಲಿಲ್ಲ. ಹೀಗಾಗಿ, ಏನಾದ್ರೂ ಮಾಡಿ ಒಂದು ಕ್ಯಾಮರ ಖರೀದಿಸಿ ಫೋಟೊ ತೆಗೆಯಬೇಕು ಅನ್ನುವ ಭಾರಿ ಆಸೆ ಹೊಂದಿದ್ದ ತೇಜಸ್ವಿ ಅದಕ್ಕೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು.

ಒಮ್ಮೆ ಮೈಸೂರಿನ ರಾಮಕೃಷ್ಣ ಆಶ್ರಮದವರು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ತೇಜಸ್ವಿಯವರಿಗೆ ಮೂರನೇ ಬಹುಮಾನ ಬಂತು. ಬಹುಮಾನವಾಗಿ ದೊರೆತ ಹಣಕ್ಕೆ ತಾವು ಸೇರಿಸಿಟ್ಟುಕೊಂಡಿದ್ದ ಒಂದಿಷ್ಟು ದುಡ್ಡನ್ನು ಸೇರಿಸಿಯೋಏನೋ, ಚಿಕ್ಕದೊಂದು Kodak Baby Brownie ಕ್ಯಾಮರ ಖರೀದಿಸಿದರು. ಆ ನಂತರ ಅದನ್ನು ಬಳಸಿ, ತಮ್ಮ ತಂದೆ ಮತ್ತು ಮನೆಯ ಇತರರ ಜೊತೆಗೆ ಸುತ್ತಲಿನ ಪರಿಸರದ ಫೋಟೊ ತೆಗೆಯಲು ಆರಂಭಿಸಿದರು. ಅಲ್ಲಿಂದ ಶುರುವಾದ ಕ್ಯಾಮರ ಜೊತೆಗಿನ ಒಡನಾಟ, ತೇಜಸ್ವಿ ಜೀವನದ ಉದ್ದಕ್ಕೂ ಮುಂದುವರೆಯಿತು. ಅಲ್ಲಿಂದಾಚೆಗಿನ ದಿನದಲ್ಲಿ, ಯಾರಿಗಾದರೂ ಹಳೆ ಕ್ಯಾಮರ ಮಾರೋದು, ಹೊಸದನ್ನು ಕೊಳ್ಳೋದು ಮಾಡುತ್ತಿದ್ದರು.

ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೃಷಿ ಮಾಡಲೆಂದು ಮೂಡಿಗೆರೆ ಬಂದ ಮೇಲಂತೂ ಹವ್ಯಾಸ ಅನ್ನುವುದು ಗೀಳಿನಂತಾಯಿತು. ಹಕ್ಕಿಗಳ ಚಿತ್ರ ತೆಗೆಯುವುದು ದಿನನಿತ್ಯದ ಕೆಲಸವಾಯಿತು. ತೇಜಸ್ವಿ ಅವರ ಕ್ಯಾಮರ ಹುಚ್ಚು ಎಷ್ಟರಮಟ್ಟಿಗಿತ್ತೆಂದರೆ, ವಿದೇಶದಲ್ಲಿದ್ದ ಸೋದರ ಪ್ರತಿಬಾರಿ ಭಾರತಕ್ಕೆ ಬರುವಾಗಲೂ “ನನಗೊಂದು ಹೊಸ ಕ್ಯಾಮರ ತಾ” ಅನ್ನುತ್ತಿದ್ದರಂತೆ. ಇದು ಹಲವು ಬಾರಿ ಮರುಕಳಿಸಿದ ನಂತರ ಅವರ ಸೋದರ, “ನೀನೇನು ಕ್ಯಾಮರ ತಿಂತೀಯಾ ಹೇಗೆ” ಎಂದು ತೇಜಸ್ವಿಯವರನ್ನು ಕೇಳಿದ್ದರಂತೆ.

ಹಕ್ಕಿ-ಪಕ್ಷಿಗಳ ಫೋಟೊ ತೆಗೆಯುತ್ತಲೇ ಅವುಗಳ ಜೀವನ ಕ್ರಮವನ್ನೂ ತಿಳಿಯುವ ಪ್ರಯತ್ನ ಮಾಡಿದ ತೇಜಸ್ವಿ, “ಹಕ್ಕಿಗಳ ಫೋಟೊ ತೆಗೆಯುವುದು ಸುಲಭವಲ್ಲ ಅದಕ್ಕಾಗಿ ಛಾಯಾಗ್ರಾಹಕ ಹಠಯೋಗಿಯಾಗಬೇಕು” ಅನ್ನುತ್ತಿದ್ದರು. ತೇಜಸ್ವಿ ತೆಗೆದ ಹಕ್ಕಿಗಳ ಚಿತ್ರಗಳು ಮತ್ತು ಲೇಖನಗಳು ತುಷಾರ ಇತ್ಯಾದಿ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿದ್ದವು. ತೇಜಸ್ವಿ  ಅವರು ರಚಿಸಿರುವ “ಕನ್ನಡ ನಾಡಿನ ಹಕ್ಕಿಗಳು”, “ಹಕ್ಕಿಪುಕ್ಕ” ಪುಸ್ತಕಗಳಲ್ಲೂ ಪ್ರಕಟವಾಗಿವೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಮತ್ತು ಮೈಸೂರಿನ ರಂಗಾಯಣದಲ್ಲೂ ತೇಜಸ್ವಿ ತೆಗೆದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ತೇಜಸ್ವಿ ಚಿತ್ರಗಳು ಶುಭಾಶಯ ಪತ್ರಗಳಾಗಿ, ಕ್ಯಾಲೆಂಡರ್ ಗಳಾಗಿ ರಾಜ್ಯದ ಮನೆ ಮನೆಗಳನ್ನು ತಲುಪಿವೆ. ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಪರಿಸರದ ಬಗ್ಗೆ ಕೌತುಕ ಮತ್ತು ಕಾಳಜಿ ಮೂಡಿಸಲು ನೆರವಾಗಿವೆ.

ಹಕ್ಕಿಗಳ ಬಗ್ಗೆ ತೇಜಸ್ವಿ ಪುಸ್ತಕಗಳು

ಸುಪ್ರಸಿದ್ಧ ಪಕ್ಷಿ ತಜ್ಞ ಸಲೀಮ್ ಅಲಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ತೇಜಸ್ವಿ ಅವರು 1993ರಲ್ಲಿ ಕೃಷಿ ವಿಜ್ಞಾನಿ ಚಕ್ರವರ್ತಿ ಅವರೊಂದಿಗೆ ಸೇರಿ ರಚಿಸಿರುವ ದಕ್ಷಿಣ ಭಾರತದ ಹಕ್ಕಿಗಳು ಪುಸ್ತಕ ಕನ್ನಡದ ಓದುಗರ ಪಕ್ಷಿ ವೀಕ್ಷಣೆ ಕೈಪಿಡಿಯಾಗಿದೆ. ಆ ಬಳಿಕ 1994ರಲ್ಲಿ “ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು ಭಾಗ-1”, “ಹೆಜ್ಜೆ ಮೂಡದ ಹಾದಿ-ಕನ್ನಡ ನಾಡಿನ ಹಕ್ಕಿಗಳು-ಭಾಗ 2(1996) ”, “ಹಕ್ಕಿ ಪುಕ್ಕ(1997) ” ಪುಸ್ತಕಗಳು ಹಲವಾರು ಹಕ್ಕಿಗಳ ಪರಿಚಯ ಮಾಡಿಕೊಡುತ್ತವೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು

“ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನ ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಶನ್ ಗಾಗಿ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು” ಎಂದು ಹೇಳುತ್ತಿದ್ದ ತೇಜಸ್ವಿ ಅವರು, ಯಾವುದೇ ರೀತಿಯ ಮನ್ನಣೆ, ಪ್ರಚಾರಕ್ಕೆ ಎಂದೂ ಹಾತೊರೆದವರಲ್ಲ. “ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ವಿಭಾಗವಾದ ಹಾಗೆ, ಪ್ರಶಸ್ತಿಗಳ ಹಿಂದೆ ಹೋದ್ರೆ, ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತಲೂ ಒಂದು ವಿಭಾಗ ಶುರು ಆಗುತ್ತೆ” ಅಂತ ಅವರು ಕಟುವಾಗಿ ಹೇಳುತ್ತಿದ್ದರು. ಹೀಗಿದ್ದರೂ ಕೂಡ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳು ತೇಜಸ್ವಿ ಅವರನ್ನು ಹುಡುಕಿಕೊಂಡು ಬಂದಿವೆ.

ತೇಜಸ್ವಿ ಅವರಿಗೆ, “ಕರ್ನಾಟಕ ಸಾಹಿತ್ಯ ಅಕಾಡೆಮಿ”, “ಕೇಂದ್ರ ಸಾಹಿತ್ಯ ಅಕಾಡೆಮಿ”, “ಭಾರತೀಯ ಭಾಷಾ ಪರಿಷತ್”, “ಶಿವರಾಮ ಕಾರಂತ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರು ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ 2001ರಲ್ಲಿ ಪ್ರತಿಷ್ಠಿತ “ಪಂಪ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತೇಜಸ್ವಿ ಬಗ್ಗೆ ಇತರರು ಬರೆದಿರುವ ಪುಸ್ತಕಗಳು

ತೇಜಸ್ವಿ ಅವರ ಅಕಾಲಿಕ ನಿಧನ ನಂತರದ ಇಲ್ಲಿಯವರೆಗೆ ಅವರ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿವೆ. “ತೇಜಸ್ವಿ ಲೋಕ”-2007 (ಡಿ.ವಿ.ಪ್ರಹ್ಲಾದ್), “ತೇಜಸ್ವಿ ನೆನಪು”-2007 (ಬಿ.ಎಲ್.ರಾಜು ಮತ್ತು ಬಿ.ಚಂದ್ರೇಗೌಡ), “ನೆನಪಿನಂಗಳದಲ್ಲಿ ತೇಜಸ್ವಿ-2010 (ಹಳೆಕೋಟೆ ರಮೇಶ್),  “ಪೂರ್ಣಚಂದ್ರ ತೇಜಸ್ವಿ”-2010 (ಬೆ.ಗೋ.ರಮೇಶ್), ಕಾಡಿನ ಸಂತ-ತೇಜಸ್ವಿ-ಕೆಲವು ನೆನಪುಗಳು(2011)-ಧನಂಜಯ ಜೀವಾಳ ಬಿ.ಕೆ.,  “ನಮ್ಮೆಲ್ಲರ ತೇಜಸ್ವಿ”-2012(ನರೇಂದ್ರ ರೈ ದೇರ್ಲ), “ತೇಜಸ್ವಿ ಬದುಕಿದ್ದಾರೆ”-2013(ಕೀರ್ತಿ ಕೋಲ್ಗಾರ್), “ತೇಜಸ್ವಿ ನಾನು ಕಂಡಷ್ಟು”-2013 (ಧನಂಜಯ ಜೀವಾಳ ಬಿ.ಕೆ), “ತೇಜಸ್ವಿಯನ್ನು ಹುಡುಕುತ್ತಾ”-2015(ಆರ್.ದೊಡ್ಡೇಗೌಡ), “ನಮ್ಮ ನಡುವಿನ ತೇಜಸ್ವಿ”-2016 (ಪ್ರಸಾದ್ ರಕ್ಷಿದಿ), ಮತ್ತು ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು 2015ರಲ್ಲಿ  ಪ್ರಕಟಿಸಿರುವ “ನನ್ನ ತೇಜಸ್ವಿ” ಪುಸ್ತಕಗಳು ಮುಖ್ಯವಾಗಿವೆ. ಡಾ.ಕೆ.ಸಿ.ಶಿವಾರೆಡ್ಡಿ ಅವರು ಬರೆದಿರುವ “ಕೆ.ಪಿ.ಪೂರ್ಣಚಂದ್ರ ತೇಜಸ್ವಿ-ಬದುಕಿನ ಬಗೆ” ಎಂಬ ಶೀರ್ಷಿಕೆಯ ಕಿರು ಪುಸ್ತಕವನ್ನು, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಂಪರ್ಕ ಇಲಾಖೆಯವರು 2018ರಲ್ಲಿ ಪ್ರಕಟಿಸಿದ್ದಾರೆ.

ತೇಜಸ್ವಿ ಕಾದಂಬರಿಗಳು

ಕರ್ವಾಲೋ”     

1980ರಲ್ಲಿ ಪ್ರಕಟಗೊಂಡ “ಕರ್ವಾಲೋ”  ಕಾದಂಬರಿ ತೇಜಸ್ವಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಅಲ್ಲಿಂದಾಚೆಗಿನ 40 ವರ್ಷಗಳಲ್ಲಿ 48ಕ್ಕೂ ಹೆಚ್ಚು ಬಾರಿ ಮರು ಮುದ್ರಣವಾಗಿರುವ “ಕರ್ವಾಲೋ” ತಮಿಳು, ಮರಾಠಿ, ಮಲೆಯಾಳಂ, ಇಂಗ್ಲಿಷ್, ಜಪಾನಿ ಹಾಗೂ ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿದೆ. ಜೀವವಿಕಾಸದ ದಾರಿಯಲ್ಲಿ ರೂಪಾಂತರ ಹೊಂದಿದ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳನ್ನು ಹಲವಾರು ಸ್ವಾರಸ್ಯಕರ ಪ್ರಸಂಗಗಳ ಮೂಲಕ ತೇಜಸ್ವಿ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

1966ರಲ್ಲಿ ವಿವಾಹವಾದ ನಂತರ, ತೇಜಸ್ವಿ ಮತ್ತು ರಾಜೇಶ್ವರಿ ಅವರು ನೆಲೆಸಿದ್ದ “ಚಿತ್ರಕೂಟ” ತೋಟದ ಮನೆಯಲ್ಲಿ ಮೊದಲ 10 ವರ್ಷಗಳ ಕಾಲ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಹೀಗಾಗಿ, ತೇಜಸ್ವಿ ಅವರ ಮೊದಲ ಕಾದಂಬರಿ “ಕರ್ವಾಲೋ” ಸಿಮೇಎಣ್ಣೆ ದೀಪದ ಬೆಳಕಲ್ಲೇ ಸೃಷ್ಟಿಯಾದ ಮಹತ್ ಕೃತಿ ಅನ್ನಬಹುದು.

ಚಿದಂಬರ ರಹಸ್ಯ” 

1985ರಲ್ಲಿ ಬಿಡುಗಡೆಯಾದ “ಚಿದಂಬರ ರಹಸ್ಯ”  ಕಾದಂಬರಿಯೂ ಸಾಕಷ್ಟು ಜನಪ್ರಿಯವಾಗಿತ್ತು. ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಈ ಕಾದಂಬರಿ, ತೇಜಸ್ವಿ ಅವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.

ಜುಗಾರಿ ಕ್ರಾಸ್

ಆ ಬಳಿಕ 1994ರಲ್ಲಿ ಬಂದ “ಜುಗಾರಿ ಕ್ರಾಸ್” ಕಾದಂಬರಿ, ಇವತ್ತಿನ ಸನ್ನಿವೇಶದಲ್ಲಿ, ಅರಣ್ಯ ಅನ್ನುವುದು ಯಾವ ರೀತಿಯಲ್ಲಿ ದುಡ್ಡು ಮಾಡುವ ದಂಧೆಯ ಕೇಂದ್ರವಾಗಿದೆ, ಇಲ್ಲಿ ರಾಜಕೀಯ ಶಕ್ತಿಗಳ ಪಾತ್ರವೇನು ಅನ್ನುವುದನ್ನು ನಿರೂಪಿಸುತ್ತದೆ.

ಮಾಯಾಲೋಕ

ಆ ಬಳಿಕ 2006ರಲ್ಲಿ ಪ್ರಕಟವಾದ “ಮಾಯಾಲೋಕ” ತೇಜಸ್ವಿ ಅವರ ಜೀವಿತ ಕಾಲದಲ್ಲಿ ಪ್ರಕಟಗೊಂಡ ಕೊನೆಯ ಕಾದಂಬರಿ. ಈ ಕೃತಿಯೂ ಕೂಡ ನಿಂತ ನೀರಿನಂತಿದ್ದ ಕನ್ನಡದ ಕಥನದ ರೀತಿ ನೀತಿಗಳಿಗೆ ಹೊಸ ದಾರಿಯನ್ನು ಸೂಚಿಸಿದ ಕೃತಿಯೆಂದು ಪ್ರಶಂಸೆ ಪಡೆದಿದೆ. ಈ ಕಾದಂಬರಿಯ ಮತ್ತಷ್ಟು ಸಂಪುಟಗಳನ್ನು ಬರೆಯಲು ತೇಜಸ್ವಿ ಅವರು ಉದ್ದೇಶಿಸಿದ್ದರೂ ಕೂಡ ಅದು ಕೈಗೂಡಲಿಲ್ಲ.

ಕಾಡು ಮತ್ತು ಕ್ರೌರ್ಯ

ಇವೆಲ್ಲ ಕಾದಂಬರಿಗಳಿಗಿಂತಲೂ ಮೊದಲು 1962ರಲ್ಲಿ ತಮ್ಮ 24ರ ವಯಸ್ಸಿನ ಹರೆಯದಲ್ಲೇ “ಕಾಡು ಮತ್ತು ಕ್ರೌರ್ಯ” ಎಂಬ ಕಾದಂಬರಿಯನ್ನು ಬರೆದಿದ್ದ ತೇಜಸ್ವಿ, ಅದನ್ನು ಹಾಗೇ ಇರಿಸಿಕೊಂಡಿದ್ದರು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಇದನ್ನು ಮತ್ತೆ ತಿದ್ದಿ ಪ್ರಕಟಿಸುವ ಇರಾದೆ ಅವರಿಗಿತ್ತು. ಆದರೆ, ತನ್ನ ಜಾಯಮಾನಕ್ಕೆ ತಕ್ಕಂತೆ ಅನಿರೀಕ್ಷಿತವಾಗಿ ಬಂದ ಜವರಾಯನ ಕರೆಗೆ ಓಗೊಟ್ಟ ತೇಜಸ್ವಿ, ಈ ಕೆಲಸವನ್ನು ಮಾಡಲಾಗಲಿಲ್ಲ. ತೇಜಸ್ವಿ ನಿಧನರಾದ 6 ವರ್ಷಗಳ ಬಳಿಕ 2013ರಲ್ಲಿ ಈ ಕಾದಂಬರಿ ಪ್ರಕಟವಾಯಿತು.

ಕಿರು ಕಾದಂಬರಿಗಳು

1966ರಲ್ಲಿ ಪ್ರಕಟವಾದ “ಸ್ವರೂಪ” ಮತ್ತು 1973ರಲ್ಲಿ ಮುದ್ರಣವಾದ “ನಿಗೂಢ ಮನುಷ್ಯರು”  ತೇಜಸ್ವಿ ರಚಿಸಿದ ಎರಡು ಕಿರು ಕಾದಂಬರಿಗಳು. ಮನುಷ್ಯರ ನಡುವಿನ ಸಂಬಂಧಗಳ ನಿಗೂಢತೆ ಮತ್ತು ಸಂಕೀರ್ಣತೆಯನ್ನು ಹೇಳುವ ನಿಗೂಢ ಮನುಷ್ಯರು, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ.

ಪರಿಸರ ಮತ್ತು ವೈಜ್ಞಾನಿಕ ಕತೆಗಳು

ಪರಿಸರ ಮತ್ತು ವಿಜ್ಞಾನವನ್ನು ಕಥಾ ವಸ್ತುವಾಗಿ ಒಳಗೊಂಡ 8 ಕಥಾ ಸಂಕಲನಗಳನ್ನು ತೇಜಸ್ವಿ ಅವರು ರಚಿಸಿದ್ದಾರೆ.1991ರಲ್ಲಿ ಪ್ರಕಟವಾದ ಪರಿಸರದ ಕಥೆ ಸಂಕಲನದಲ್ಲಿ ಕಿವಿಯೊಡನೆ ಒಂದು ದಿನ, ಎಂಗ್ಟನ ಪುಂಗಿ, ಸುಸ್ಮಿತಾ ಮತ್ತು ಹಕ್ಕಿ ಮರಿ ಇತ್ಯಾದಿ ಬರಹಗಳಿವೆ.

ತೇಜಸ್ವಿ ಸಾಹಿತ್ಯ ವೈವಿಧ್ಯತೆ

ಕಥಾ ಸಂಕಲನಗಳು

ತೇಜಸ್ವಿ ಅವರು ಸಾಕಷ್ಟು ಕತೆಗಳನ್ನು ಬರೆದಿದ್ದು, ಅವುಗಳು ನಾಲ್ಕು ಸಂಕಲನಗಳಾಗಿ ಪ್ರಕಟಗೊಂಡಿವೆ. 1957ರಲ್ಲಿ ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕಕ್ಕಾಗಿ ಬರೆದಿದ್ದ ‘ಲಿಂಗ ಬಂದ’ ಅನ್ನುವ ಕತೆ, ತೇಜಸ್ವಿ ಅವರು ಬರೆದ ಮೊದಲ ಕತೆ ಅನ್ನಲಾಗಿದೆ. ಈ ಕತೆಗೆ ಪ್ರಥಮ ಬಹುಮಾನ ಮತ್ತು ಅದರ ಜೊತೆಯಲ್ಲೇ ಕಳಿಸಿದ್ದ ‘ಗುಡುಗು ಹೇಳಿದ್ದೇನು’ ಅನ್ನುವ ಕತೆಗೆ, ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿಯೂ ದೊರಕಿತ್ತು.

1962ರಲ್ಲಿ ಬಂದ ‘ಹುಲಿಯೂರಿನ ಸರಹದ್ದು’ ತೇಜಸ್ವಿಯವರ ಮೊದಲ ಕಥಾ ಸಂಕಲನ. ಇದರಲ್ಲಿ ‘ಲಿಂಗ ಬಂದ’ ಕತೆಯೂ ಸೇರಿದಂತೆ 6 ಕತೆಗಳಿವೆ. 1973ರಲ್ಲಿ ಪ್ರಕಟವಾದ ‘ಅಬಚೂರಿನ ಪೋಸ್ಟ್ ಆಫೀಸು’ ಕಥಾ ಸಂಕಲನದಲ್ಲಿ, ಅದೇ ಹೆಸರಿನ ಕತೆ ಸೇರಿದಂತೆ ‘ತಬರನ ಕತೆ’, ‘ಕುಬಿ ಮತ್ತು ಇಯಾಲ’, ‘ತುಕ್ಕೋಜಿ’ ಹಾಗೂ ‘ಅವನತಿ’ ಎಂಬ ಶೀರ್ಷಿಕೆಯ ಕತೆಗಳಿವೆ. ಇವುಗಳ ಪೈಕಿ ‘ಅಬಚೂರಿನ ಪೋಸ್ಟ್ ಆಫೀಸು(1973ರಲ್ಲಿ)’, ‘ತಬರನ ಕತೆ(1987)’, ‘ಕುಬಿ ಮತ್ತು ಇಯಾಲ(1992ರಲ್ಲಿ)’ ಸಿನೆಮಾಗಳಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿವೆ. 1991ರಲ್ಲಿ ಬಂದ ‘ಕಿರಗೂರಿನ ಗಯ್ಯಾಳಿಗಳು’ ಕಥಾ ಸಂಕಲನದಲ್ಲಿ ನಾಲ್ಕು ಕತೆಗಳಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿದೆ. ಹಿಂದಿ, ಇಂಗ್ಲಿಷ್, ಮರಾಠಿ, ಮಲೆಯಾಳಮ್ ಮತ್ತು ಕೊಡವ ಭಾಷೆಗೂ ಅನುವಾದವಾಗಿರುವ ‘ಕಿರಗೂರಿನ ಗಯ್ಯಾಳಿಗಳು’, 2016ರಲ್ಲಿ ಸಿನೆಮಾ ಆಗಿ ತೆರೆಕಂಡಿದೆ.

ಪಾಕ ಕ್ರಾಂತಿ ಮತ್ತು ಇತರ ಕತೆಗಳು”     

2008ರಲ್ಲಿ ಬಂದ ಪಾಕ ಕ್ರಾಂತಿ ಮತ್ತು ಇತರ ಕತೆಗಳು ಸಂಕಲನದಲ್ಲಿ ತೇಜಸ್ವಿ ಅವರ ದಿನ ನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳು ಕತೆಗಳ ರೂಪ ಪಡೆದುಕೊಂಡಿವೆ.

ಕವನ ಸಂಕಲನ

1962ರಲ್ಲಿ ಪ್ರಕಟವಾದ ‘ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು’, ತೇಜಸ್ವಿ ಅವರ ಏಕೈಕ ಕವನ ಸಂಕಲನ. ಇಲ್ಲಿ ಸಿಟ್ಟು, ಹತಾಶೆ, ಅಸಹಾಯಕತೆ ಮನೋಭಾವಗಳು ಕಾವ್ಯದ ವಸ್ತುಗಳಾಗಿವೆ.

ನಾಟಕ

1964ರಲ್ಲಿ ಪ್ರಕಟವಾದ ‘ಯಮಳ ಪ್ರಶ್ನೆ’  ತೇಜಸ್ವಿ ಅವರು ರಚಿಸಿದ ಒಂದು ಅಸಂಗತ ನಾಟಕ. ಇಲ್ಲಿ ಅಸಂಗತ ಅಂದರೆ, ಅಸ್ತವ್ಯಸ್ತವಾಗಿರುವುದು ಅಥವ ಪಾತ್ರ ಮತ್ತು ಸನ್ನಿವೇಶಗಳು ಒಂದಕ್ಕೊಂದು ಸಂಬಂಧವಿಲ್ಲದ ರೀತಿಯಲ್ಲಿರುವುದು ಎಂದು ಅರ್ಥ

ನಡೆಯುವ ಕಡ್ಡಿಹಾರುವ ಎಲೆ (ಹುಳುಗಳ ವಿಸ್ಮಯ ಕೋಶ-1)”  

ಇದು ತೇಜಸ್ವಿ ಮತ್ತು ಕೀಟ ತಜ್ಞ ಡಾ.ವಿ.ವಿ. ಬೆಳವಾಡಿ ಅವರು ಸೇರಿ ರಚಿಸಿರುವ ಪುಸ್ತಕ. ನಮ್ಮ ಪರಿಸರದಲ್ಲಿ ಕಾಣ ಸಿಗುವ ಚಿಟ್ಟೆ, ಜೇಡ, ಮಿಡತೆ, ಮಿಂಚುಹುಳು ಸೇರಿದಂತೆ ಹಲವಾರು ಕೀಟಗಳ ಬಗ್ಗೆ, ಅವುಗಳ ಅಂಗರಚನೆಯ ವಿಶೇಷಗಳ ಬಗ್ಗೆ ಸ್ವಾರಸ್ಯಕರ ವಿವವರಣೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ.

ವಿಸ್ಮಯ(1993-94)-ಪರಿಸರದ ವಿಶ್ವರೂಪ–ಮಾಲಿಕೆ

ಪ್ರದೀಪ್ ಕೆಂಜಿಗೆ ಅವರೊಂದಿಗೆ ಸೇರಿ, “ವಿಸ್ಮಯ ಭಾಗ 1, 2 ಮತ್ತು 3” ರಚಿಸಿರುವ ತೇಜಸ್ವಿಯವರು ವೈಜ್ಞಾನಿಕ ಪರಿಕಲ್ಪನೆಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. 

1993ರಲ್ಲಿ ಬಂದ “ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು” ಸಂಗ್ರಹದಲ್ಲಿ, ಒಂಟೆ ಹುಳು, ಏರೋಪ್ಲೇನ್ ಚಿಟ್ಟೆ, ಚೀಂಕ್ರ ಮೇಸ್ತ್ರಿ ಮತ್ತು ಅರಿಸ್ಟಾಟಲ್, ಹಲ್ಲಿಯ ಪ್ರಾಣ ಬಾಲದಲ್ಲಿ, ನಾವು ಕೊಂದ ಹಕ್ಕಿ ಇತ್ಯಾದಿ ಕತೆಗಳಿವೆ.


Leave a Reply

Your email address will not be published. Required fields are marked *